ಸಾರಾಂಶ
ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಕೇಂದ್ರ ಸರ್ಕಾರ 2004ರಲ್ಲಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದಾಗ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ಮಾದರಿಯಂತೆ ಹೊಸದಾಗಿ ಸರ್ಕಾರಿ ನೌಕರಿಗೆ ಸೇರುವವರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದ ಪರಿಣಾಮವಾಗಿ ಸರ್ಕಾರಿ ಸೇವೆಯಿಂದ ನಿವೃತ್ತಿಯಾಗುವವರು ಹಳೆ ಪಿಂಚಣಿ ಯೋಜನೆಯಂತೆ ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಈಗಾಗಲೆ 8 ನೇ ವೇತನ ಆಯೋಗ ರಚಿಸಿದೆ. ಕಳೆದ ಮಾರ್ಚ್ 25ರಂದು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‍ರವರು ಲೋಕಸಭೆಯಲ್ಲಿ ಬಿಲ್ ಮಂಡಿಸುವಾಗ ಏ.1-2026 ಮೊದಲು ನಿವೃತ್ತಿಯಾದ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಂಡಿದ್ದಾರೆ. ಇದರಿಂದ ನಿವೃತ್ತ ಸರ್ಕಾರಿ ನೌಕರರು ಹಾಗೂ ಕುಟುಂಬದವರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಾರೆಂದು ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಅಖಿಲ ಭಾರತ ರಾಜ್ಯಗಳ ಪಿಂಚಣಿದಾರರ ಒಕ್ಕೂಟವು ಮೇ 29ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಹೋರಾಟ ನಡೆಸಿ ದೇಶದ ಎಲ್ಲಾ ರಾಜ್ಯಗಳ ನಿವೃತ್ತ ನೌಕರರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಯಿತು. ಅಂದಿನಿಂದ ಇಂದಿನವರೆಗೂ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದು ಕಷ್ಟ ಎನ್ನುವ ತೀರ್ಮಾನ ತೆಗೆದುಕೊಂಡಿರುವುದರಿಂದ ಸೇವೆಯಿಂದ ನಿವೃತ್ತಿಯಾದವರು ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಪ್ರಧಾನಮಂತ್ರಿಗಳನ್ನು ನಮ್ಮ ತೊಂದರೆಗಳನ್ನು ನಿವಾರಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ್, ಗೌರವಾಧ್ಯಕ್ಷ ಚಂದ್ರಶೇಖರ್, ನಿಕಟಪೂರ್ವ ಅಧ್ಯಕ್ಷ ರಂಗಪ್ಪರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ತಿಮ್ಮಪ್ಪ, ಜೆ.ಪಿ.ಜ್ಞಾನಮೂರ್ತಿ, ಬಿ.ಬಡಮಲ್ಲಪ್ಪ, ಮಂಜುನಾಥ್, ನಿರ್ದೇಶಕ ಪಿ.ನಾಗರಾಜ್ ಹಾಗೂ ಸಂಘಧ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.