ಮಳಿಗೆಗಳ ಹರಾಜಿನಲ್ಲಿ ಮೀಸಲಾತಿ ಜಾರಿಗೆ ಆಗ್ರಹ

| Published : Jan 24 2025, 12:45 AM IST

ಸಾರಾಂಶ

ರಾಮನಗರ: ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮ ಅನುಷ್ಠಾನಗೊಳಿಸುವುದು ಹಾಗೂ ಮುಖ್ಯಾಧಿಕಾರಿ ಶ್ವೇತಾಬಾಯಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಹಾರೋಹಳ್ಳಿಯಿಂದ ರಾಮನಗರದವರೆಗೆ ಬೈಕ್ ರ್ಯಾಲಿ ನಡೆಸಿದರು.

ರಾಮನಗರ: ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮ ಅನುಷ್ಠಾನಗೊಳಿಸುವುದು ಹಾಗೂ ಮುಖ್ಯಾಧಿಕಾರಿ ಶ್ವೇತಾಬಾಯಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಹಾರೋಹಳ್ಳಿಯಿಂದ ರಾಮನಗರದವರೆಗೆ ಬೈಕ್ ರ್ಯಾಲಿ ನಡೆಸಿದರು.

ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಆವರಣದಿಂದ ಬೈಕ್ ರ್ಯಾಲಿ ಹೊರಟು ಬಿಡದಿಗೆ ಆಗಮಿಸಿದರು. ಅಲ್ಲಿಯೂ ಕೆಲ ದಲಿತ ಸಂಘಟನೆಗಳ ಕಾರ್ಯಕರ್ತರು ರ್ಯಾಲಿಯನ್ನು ಬೆಂಬಲಿಸಿ ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರಿಗೆ ಆಗಮಿಸಿ ಧರಣಿ ಕುಳಿತರು.

ಹಾರೋಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ ಸುಮಾರು 250ಕ್ಕೂ ಅಧಿಕ ಮಳಿಗೆಗಳಿವೆ. ಈ ಮಳಿಗೆಗಳಿಗೆ 1991ರಲ್ಲಿ ಹರಾಜು ಪ್ರಕ್ರಿಯೆ ಜರುಗಿದ್ದು ಅಂದು ನಿಗದಿಪಡಿಸಿದ್ದ ಬಾಡಿಗೆಯೇ ಇಂದಿಗೂ ಮುಂದುವರಿಯುತ್ತಿದ್ದು ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗುತ್ತಿದೆ. ಅಲ್ಲದೆ ಅಂದಿನ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನಿಯಮವನ್ನು ಗಾಳಿಗೆ ತೂರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಕಾಶ ವಂಚಿಸಲಾಗಿದೆ ಎಂದು ದೂರಿದರು.

ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು 2023ರ ಜುಲೈ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳು ತಿಂಗಳೊಳಗಾಗಿ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸುವಂತೆ ಆದೇಶಿಸಿದ್ದಾರೆ. ಆದರೆ, ಕೆಲವು ಪಟ್ಟಭದ್ರರು ಜಿಲ್ಲಾಧಿಕಾರಿಯವರಿಗೆ ತಪ್ಪು ಮಾಹಿತಿ ನೀಡಿ ಹರಾಜು ಪ್ರಕ್ರಿಯೆ ಆರಂಭಿಸಿದರೆ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವುದೆಂದು ದಿಕ್ಕು ತಪ್ಪಿಸಿ ಕೊನೆ ಕ್ಷಣದಲ್ಲಿ ಹರಾಜು ಪ್ರಕ್ರಿಯೆ ರದ್ದುಗೊಳಿಸಿದ್ದಾರೆ ಎಂದು ದೂರಿದರು.

ದಲಿತ ಸಂಘಟನೆಗಳು ತಹಸೀಲ್ದಾರ್, ಮುಖ್ಯ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು ಮತ್ತು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೆಶಕರಿಗೆ ಅನೇಕ ಬಾರಿ ಹಲವು ಮನವಿಗಳನ್ನು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಹಾರೋಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ವಾಸ್ತವವನ್ನು ಅವಲೋಕಿಸಿ ಅತಿ ಶೀಘ್ರದಲ್ಲಿ ಹರಾಜು ಪ್ರಕ್ರಿಯೆ ಆರಂಭಿಸಿ ನಿಯಮಾನುಸಾರ ಮೀಸಲಾತಿ ನಿಯಮವನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಗಡಿ ಮಳಿಗೆಗಳ ಹರಾಜು ನಡೆಸದೆ ಉದ್ದೇಶ ಪೂರ್ವಕವಾಗಿ ಎಸ್ಸಿ ಎಸ್ಟಿಗಳಿಗೆ ಮೀಸಲಾತಿ ನೀಡದೆ ವಂಚಿಸುತ್ತಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ ಅವರನ್ನು ಅಮಾನತುಗೊಳಿಸಬೇಕು. ಅಂಗಡಿ ಮಳಿಗೆಗಳ ಹರಾಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರೆಬೆತ್ತಲೆ ಮೆರವಣಿಗೆ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಧರಣಿ ನಿರತರ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಬಿನೋಯ್ ಮನವಿ ಸ್ವೀಕರಿಸಿ ಜನವರಿ 30ರೊಳಗೆ ಸಭೆ ನಡೆಸಿ ಸಮಸ್ಯೆ ಬಗಹೆರಿಸುವ ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ದಲಿತ ಪರ ಸಂಘಟನೆಗಳ ಮುಖಂಡರಾದ ಡಾ.ಜಿ.ಗೋವಿಂದಯ್ಯ, ಕೋಟೆ ಕುಮಾರ್, ಜೆ.ಎಂ.ಶಿವಲಿಂಗಯ್ಯ, ಬನಶಂಕರಿ ನಾಗು, ನಿಖಿಲ್ ಸಜ್ಜೆನಿಂಗಯ್ಯ, ಬಿಡದಿ ದಿನೇಶ್, ಕೆಂಚನಕುಪ್ಪೆ ರಾಮಣ್ಣ, ಇಟ್ಟಮಡು ಶ್ರೀಧರ್, ಅಪ್ಪಗೆರೆ ಶ್ರೀನಿವಾಸ್, ಶಿವರಾಜು, ವೆಂಕಟೇಶ್, ಬಾನಂದೂರು ಶಿವಕುಮಾರ್, ಹರೀಶ್ ಬಾಲು, ಲಕ್ಷ್ಮಣ್, ಸುರೇಶ್ ಮತ್ತಿತರರು ಭಾಗವಹಿಸಿದ್ದರು.

23ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟನೆ ನಡೆಸಿದ ದಲಿತ ಪರ ಸಂಘಟನೆಗಳ ಕಾರ್ಯಕರ್ತರಿಂದ ಉಪವಿಭಾಗಾಧಿಕಾರಿ ಬಿನೋಯ್ ಮನವಿ ಆಲಿಸಿದರು.