ಸಾರಾಂಶ
ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕು ಘಟಕಗಳ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಹಿರೇಕೆರೂರು: ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾದಿಗ ಸಮುದಾಯದ ಪರವಾಗಿ ಮಾತನಾಡಬೇಕು ಎಂದು ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕು ಘಟಕಗಳ ವತಿಯಿಂದ ಶಾಸಕ ಯು.ಬಿ. ಬಣಕಾರ ಅವರಿಗೆ ಶನಿವಾರ ಪಟ್ಟಣದಲ್ಲಿ ಮನವಿ ಸಲ್ಲಿಸಲಾಯಿತು.
ಎ.ಜೆ. ಸದಾಶಿವ ಆಯೋಗದ ವರದಿಯನ್ನು ಇಟ್ಟುಕೊಂಡು ನಮ್ಮ ಮಾದಿಗ ಬಾಂಧವ ವಕೀಲರು ಸುಪ್ರೀಂ ಕೋರ್ಟನಲ್ಲಿ ಸ್ಪರ್ಶ ಮತ್ತ ಅಸ್ಪರ್ಶ ಎಸ್.ಸಿ. ಸಮುದಾಯಗಳ ಬಗ್ಗೆ ಅರ್ಜಿ ದಾಖಲಿಸಿದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ತೀರ್ಪು ನೀಡಿದೆ. ಈ ಕುರಿತು ಮಾದಿಗ ಸಮುದಾಯ, ವಿವಿಧ ಹೋರಾಟಗಾರರ ಸಂಘಟಕರು ತಲಾ ತಲಾಂತರದಿಂದ ನಮ್ಮ ಹಕ್ಕಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದ ಈ ವರೆಗೂ ನಮ್ಮ ಹೋರಾಟಕ್ಕೆ ಪ್ರತಿಫಲ ಸಿಗದಂತೆ ನೋಡಿಕೊಂಡಿದ್ದಾರೆ. ಸುಪ್ರೀಂ ಕೋರ್ಟಿನಿಂದ ತೀರ್ಪು ಬಂದರೂ ಸರ್ಕಾರ ಈ ವರೆಗೂ ಅದನ್ನು ಜಾರಿ ತರುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಈಗಾಗಲೇ 2011ರ ಜನಗಣತಿ ಪ್ರಕಾರ ಸರ್ಕಾರಕ್ಕೆ ಮಾಹಿತಿ ಇದ್ದರೂ ನಾಗಮೋಹನ ದಾಸ್ ಅವರ ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂಬ ಕಾಲ ವಿಳಂಬ ನೀತಿ ಅನುಸರಿಸಿಕೊಂಡು ಬರುತ್ತಿದೆ. ನಮ್ಮ ಮಾದಿಗ ವಕೀಲರ ಅವಿರತ ಶ್ರಮದಿಂದ ಕೋರ್ಟಿನಲ್ಲಿ ನಮ್ಮ ಪರವಾಗಿ ತೀರ್ಪು ಬಂದರೂ ಅದನ್ನು ಸರ್ಕಾರ ಜಾರಿಗೊಳಿಸಲು ವಿಳಂಬ ಮಾಡುತ್ತಿದೆ. ಕಾರಣ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಕುರಿತು ನಮ್ಮ ಪರವಾಗಿ ಹಕ್ಕೋತ್ತಾಯ ಮಾಡಿ, ನಮ್ಮ ಪರವಾಗಿ ಧ್ವನಿ ಎತ್ತಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೋಡಬೇಕು ಎಂದು ಸಂಘಟನೆಯಿಂದ ಶಾಸಕರಲ್ಲಿ ಮನವಿ ಮಾಡಿ ಮನವಿ ಸಲ್ಲಿಸಿದರು.ಸಂಘಟನೆಗಳ ಪ್ರಮುಖರಾದ ಮಹದೇವಪ್ಪ ಮಾಳಮ್ಮನವರ, ಬಿ.ಆರ್. ಪುಟ್ಟಣ್ಣನವರ, ಮಾಲತೇಶ ಬಿಲ್ಲಳ್ಳಿ, ಶಿವಾಜಿ ದೊಡ್ಮನಿ, ನಾಗರಾಜ ನಡುವಿನಮನಿ, ಕುಮಾರ ದ್ಯಾವಣ್ಣನವರ, ಹನುಮಂತಪ್ಪ ಗಾಜೇರ, ಭರಮಪ್ಪ ಹರಿಜನ, ಮಾಲತೇಶ ಮಾದರ, ಗೋಣೆಪ್ಪ ಕೆಳಗೇರಿ, ಪ್ರಶಾಂತ ತಿರಕಪ್ಪನವರ, ಕಾಂತೇಶ ಬಾಲಬಸವರ, ಶೇಖಪ್ಪ ನಡುಗೇರಿ, ನಾಗಪ್ಪ ಹರಿಜನ, ಸಿದ್ದಪ್ಪ ಹರಿಜನ, ನಾಗರಾಜ ಹರಿಜನ, ಹೊನ್ನಪ್ಪ ಮಡ್ಲೂರ, ರಾಜು ಯತ್ತಿನಹಳ್ಳಿ, ನಾಗರಾಜ ಬಾತಮ್ಮನವರ, ಬಸವರಾಜ ಕಾಲ್ವೀಹಳ್ಳಿ, ಮಲ್ಲೇಶ ಬಸರಿಹಳ್ಳಿ ಹಾಗೂ ಮಾದಿಗ ಸಮಾಜದ ಮುಖಂಡರು ಇದ್ದರು.