ಸಾರಾಂಶ
ರಾಜ್ಯ ಸರ್ಕಾರ ಕೂಡಲೇ ಜಾತಿಗಣತಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಮುಸ್ಲಿಂರ 2ಬಿ ಮೀಸಲಾತಿಯನ್ನು ಶೇ. 8ಕ್ಕೆ ಹೆಚ್ಚಿಸಬೇಕು ಹಾಗೂ ಕಾಂತರಾಜ್ ಆಯೋಗ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ತನ್ನ ಯೋಜನೆಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಆಯಾ ಸಮುದಾಯಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಸ್ಥಿತಿಗತಿಗಳನ್ನು ಮೊದಲು ತಿಳಿಯಬೇಕು. ವಿವಿಧ ಯೋಜನೆಗಳ ಲಾಭ ನಿರ್ದಿಷ್ಟ ಸಮುದಾಯಕ್ಕೆ ಸಿಗುವಂತಾಗಲು ಸರ್ಕಾರ ಜನಸಂಖ್ಯೆ ಆಧಾರಿತವಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅನುಷ್ಠಾನಕ್ಕೆ ತರಲು ಕಾಂತರಾಜ ಅವರ ವರದಿಯನ್ನು ಬಹಿರಂಗಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಹಿಂದೆ 2014ರಲ್ಲಿ ಜಾತಿ ಜನಸಂಖ್ಯೆಯನ್ನು ತಿಳಿಯಲು ಕಾಂತರಾಜ ಆಯೋಗವನ್ನು ನೇಮಿಸಿ ಜಾತಿಗಣತಿಗೆ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಆದೇಶಿಸಿದ್ದರು. ಅಂತೆಯೇ ಆಯೋಗವು 2018ರಲ್ಲಿ ತನ್ನ ವರದಿಯನ್ನು ಸಿದ್ಧಪಡಿಸಿತ್ತು. ಕಾರಣಾಂತರಗಳಿಂದ ಸಿದ್ದರಾಮಯ್ಯ ಅವರು ವರದಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಾಗಲಿಲ್ಲ. ನಂತರ ಬಂದ ಎರಡೂ ಸರ್ಕಾರಗಳೂ ಅದನ್ನು ಅಂಗೀಕರಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ. ಈಗ ಆ ವರದಿ ಸಿದ್ಧವಿದೆ. ಬಿಹಾರ ಸರ್ಕಾರ ಜಾತಿಗಣತಿಯನ್ನು ಎರಡೇ ವರ್ಷಗಳಲ್ಲಿ ಪೂರ್ಣಗೊಳಿಸಿ, ಅದನ್ನು ಅಂಗೀಕರಿಸಿ ಸಾರ್ವಜನಿಕಗೊಳಿಸಿದೆ. ಅದೇ ಮಾದರಿಯಲ್ಲಿ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮುಖ್ಯಮಂತ್ರಿಗಳು ಯಾವುದೇ ಒತ್ತಡಗಳಿಗೆ ಮಣಿಯದೆ ಕಾಂತರಾಜ ಆಯೋಗದ ವರದಿಯನ್ನು ತಕ್ಷಣವೇ ಅಂಗೀಕರಿಸಿ, ಸಾರ್ವಜನಿಕಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಇಲ್ಲಿನ ಮೋತಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಸದಸ್ಯರು, ರಾಜ್ಯ ಸರ್ಕಾರ ಕೂಡಲೇ ಜಾತಿಗಣತಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯ ಜಾಕೀರ್ ಹುಸೇನ್, ಜಿಲ್ಲಾಧ್ಯಕ್ಷ ಹೈದರ್ ಅಲಿ, ಉಪಾಧ್ಯಕ್ಷ ಇನಾಯತ್, ಅನ್ವರ್ ಬಾಷಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.