ಹಾಸ್ಟೆಲ್‌ ಅವ್ಯವಹಾರ ತನಿಖೆಗೆ ಆಗ್ರಹ

| Published : Oct 14 2024, 01:23 AM IST

ಸಾರಾಂಶ

ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‍ಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡುತ್ತಿಲ್ಲ, ಮೆನು ಪ್ರಕಾರ ಊಟ ನೀಡುತ್ತಿಲ್ಲ, ಹೊಸ ಮೆನು ಇದ್ದರೂ ಸಹ ಹಳೇ ಮೆನು ಪ್ರಕಾರವೇ ಊಟನ ನೀಡಲಾಗುತ್ತಿದೆ,

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ನಡೆಯುತ್ತಿರುವ ವ್ಯಾಪಕ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ಹಾಸ್ಟಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಸ್.ಎಫ್.ಐ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದ ಎಸ್‍ಎಫ್‍ಐ ನ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ನಂತರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಿಯಮಗಳನ್ನು ಪಾಲಿಸುತ್ತಿಲ್ಲ

ಈ ಸಂದರ್ಭದಲ್ಲಿ ಎಸ್.ಎಫ್.ಐ ರಾಜ್ಯಾಧ್ಯಕ್ಷ ಎನ್.ಶಿವಪ್ಪ ಅಂಬ್ಲಿಕಲ್ ಮಾತನಾಡಿ, ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‍ಗಳಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡುತ್ತಿಲ್ಲ, ಮೆನು ಪ್ರಕಾರ ಊಟ ನೀಡುತ್ತಿಲ್ಲ, ಹೊಸ ಮೆನು ಇದ್ದರೂ ಸಹ ಹಳೇ ಮೆನು ಪ್ರಕಾರವೇ ಊಟನ ನೀಡಲಾಗುತ್ತಿದೆ, ಹಾಸ್ಟಲ್‍ನಲ್ಲಿರುವ ಬಡ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇಲಾಖೆಯ ಹಿರಿಯ ಅಧಿಕಾರಿಗಳು ಕಣ್ಣು-ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯ ದೃಷ್ಟಿಯಿಂದ ಸರ್ಕಾರ ನೀಡುತ್ತಿರುವ ಅನೇಕ ಸೌಲಭ್ಯಗಳನ್ನು ಹಾಗೂ ಪ್ರತಿನಿತ್ಯ ವಿದ್ಯಾರ್ಥಿಗಳು ಹಾಸ್ಟೆಲುಗಳಲ್ಲಿ ವಾಸ್ತವ್ಯವಿಲ್ಲದಿದ್ದರೂ ಅವರು ಇದ್ದಂತೆ ನಕಲಿ ಬಯೋಮೆಟ್ರಿಕ್ ಮೂಲಕ ವಿದ್ಯಾರ್ಥಿಗಳಿಗೆ ವಂಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಿಬೇಕಾಗಿರುವ ಸೌಲಭ್ಯಗಳನ್ನು ಇಲಾಖೆಯ ಹಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅಡುಗೆ ಸಿಬ್ಬಂದಿ ಕಾರುಬಾರು

ಎಸ್.ಎಫ್.ಐ ಜಿಲ್ಲಾಧ್ಯಕ್ಷ ಎ.ಸೋಮಶೇಖರ ಮಾತನಾಡಿ, ಹಾಸ್ಟೆಲ್ ಮೇಲ್ವಿಚಾರಕರು ಅತಿಥಿಗಳಂತೆ ಅಪರೂಪಕ್ಕೆ ಭೇಟಿ ನೀಡುತ್ತಾರೆ, ಅಡುಗೆ ಸಿಬ್ಬಂದಿಯದ್ದೇ ಕಾರು-ಬಾರು ಆಗಿದೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಲೂಟಿ ಮಾಡುತ್ತಿದ್ದು ಇಂದು ಕೇವಲ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತಕ್ಷಣ ತನಿಖೆ ನಡೆಸಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳು ನ್ಯಾಯ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಸ್ ಎಫ್‍ಐ ವತಿಯಿಂದ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ನಂತರ ಪ್ರತಿಭಟನಕಾರರು ತಹಸೀಲ್ದಾರ್ ಮನಿಷಾ ಎನ್.ಪತ್ರಿ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ ಎಫ್‍ಐ ಜಿಲ್ಲಾ ಮುಖಂಡ ಸೋಮಶೇಖರ ಸೇರಿದಂತೆ ಕಾರ್ಯಕರ್ತರು ಇದ್ದರು.