ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ

| Published : Sep 26 2025, 01:03 AM IST

ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮೇಯರ್‌ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗೊತ್ತುವಳಿ ಮಂಡಿಸಲಾಯಿತು.

ಮೇಯರ್‌ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಪಾಲಿಕೆಯ ಕಂದಾಯ ವಿಭಾಗದಲ್ಲಿ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಕಂದಾಯ ಇಲಾಖೆಯ ಉಪ ಆಯುಕ್ತೆ ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಗೆ ಪಾಲಿಕೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಪಾಲಿಕೆ ಸಭೆ ಆರಂಭವಾಗುತ್ತಿದ್ದಂತೆ ಎಐಎಂಐಎಂ ಸದಸ್ಯ ಯಾಸೀನ್ ಪಠಾಣ್ ಮಾತನಾಡಿ, ಪಾಲಿಕೆಯ ಆಸ್ತಿ‌ ಸರ್ವೇ ನಂಬರ್ ಅದಲು, ಬದಲು ಮಾಡಿ ₹35 ಲಕ್ಷ ಪಡೆದ ಆರೋಪ ಕಂದಾಯ ಇಲಾಖೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಮೇಲಿದೆ. ಅವರ ಮೇಲೆ ಕ್ರಮ‌ ಜರುಗಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸದಸ್ಯ ರವಿ ದೋತ್ರೆ ಮಾತನಾಡಿ, ಸಾರ್ವಜನಿಕರ ಕೆಲಸ ಮಾಡಲು ಹಣ ಪಡೆದಿರುವ ಆರೋಪ ಹಾಗೂ ವೇಗಾ ಕಂಪನಿಯಿಂದ ಪಾಲಿಕೆಗೆ ಬರಬೇಕಾದ ತೆರಿಗೆ ಭರಿಸಿಕೊಳ್ಳಲು ಕರ್ತವ್ಯ ಲೋಪ ಮಾಡಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕೆಂದರು.

ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್, ಅಧಿಕಾರಿಗಳಿಂದ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಆರೋಪ ಮಾಡುವುದು ಸರಿಯಲ್ಲ. ಆಯುಕ್ತರು ಬೇಕಾದರೆ ಅವರ ವಿರುದ್ಧ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಿ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, 58 ಸದಸ್ಯರು ಮತ್ತು ನಾವು ಜನರ ಸೇವೆ ಮಾಡಲು ಬಂದಿದ್ದೇವೆ. ಅಧಿಕಾರಿಗಳು ನಿರಂತರವಾಗಿ ತಪ್ಪು ಮಾಡುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಆ ನಿಟ್ಟಿನಲ್ಲಿ ಪ್ರಶ್ನಿಸುವ ಅಧಿಕಾರ ಸದಸ್ಯರಿಗಿದೆ. ಅಧಿಕಾರಿಗಳ ಮೇಲೆ ತನಿಖೆ ನಡೆಸಬೇಕು. ಪಿಐಡಿ ವಿಳಂಬವಾಗಿದೆ. ಅರ್ಜಿ ಹಲವು ತಿಂಗಳು ಕಳೆದರೂ ನೀಡಿಲ್ಲ. ಏಕೆ ವಿಳಂಬ ಮಾಡಲಾಗುತ್ತಿದೆ ಅಂತಾ ಕೇಳಿದರೆ ಸರಿಯಾದ ಮಾಹಿತಿ ನೀಡುವುದಿಲ್ಲ. ಬೆಳಗಾವಿ ಜನತೆಗೆ ಉತ್ತಮ ಆಡಳಿತ ನೀಡಬೇಕು. ದಾಖಲೆ ನೀಡಿದರೂ ಕ್ರಮವಾಗಿಲ್ಲ ಎರಡು ವರ್ಷದಲ್ಲಿ ಸಾಕಷ್ಟು ತಪ್ಪುಗಳು ಆಗಿವೆ ಎಂದು ದೂರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ , ಎಂದು ತಿರುಗೇಟು ನೀಡಿದರು.

ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಕಂದಾಯ ಅಧಿಕಾರಿ ವಿರುದ್ಧ ಠರಾವ್ ಪಾಸ್ ಮಾಡಿ ಸರ್ಕಾರಕ್ಕೆ ಕ್ರಮ ಜರುಗಿಸಲು ಕಳುಹಿಸಬೇಕು‌. ಪಾಲಿಕೆ ಠರಾವ್ ಪಾಸ್ ಮಾಡಿ ಕಳುಹಿಸಬಹುದು. ಅದನ್ನು ಬೇಕಾದರೆ ಮತಕ್ಕೆ ಹಾಕಲಿ ಎಂದರು.

ಇದಾದ ಬಳಿಕ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

ಆಯುಕ್ತೆ ಶುಭ. ಬಿ ಮಾತನಾಡಿ, ತಪ್ಪಿತಸ್ಥರು ಅವರೇ ಆಗಿದ್ದರೆ ಕ್ರಮ ಕೈಗೊಳ್ಳಬಹುದು ಎಂದರು. ಇನ್ನು ತೆರಿಗೆ ಪಾವತಿಯಲ್ಲಿ ವಿಳಂಬ ಆಗಿದೆ. ₹೭.೫ ಕೋಟಿ ರೂ. ಕಟ್ಟದಿದ್ದಾಗ. ತನಿಖೆ ಬಳಿಕ ₹೨ ಕೋಟಿ ಆಗಿದೆ. ತನಿಖಾ ತಂಡ ರಚಿಸಿ ಅವರ ವಿರುದ್ಧ ತನಿಖೆ ನಡೆಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ೨೪/೭ ಕುಡಿಯುವ ನೀರಿನ‌ ಯೋಜನೆ ಸರಿಯಾಗಿ ನಡೆಯುತ್ತಿದೆ ಎಂದು ಉತ್ತರಿಸಿದರು.

ಈ ಗದ್ದಲದ ನಡುವೆ ಎಂಇಎಸ್ ಸದಸ್ಯ ರವಿ ಸಾಳೊಂಕೆ ಮಾತನಾಡಿ, ಮಾರಾಠಿಯಲ್ಲಿ ದಾಖಲೆ ನೀಡಬೇಕು. ಅದರ ಬಗ್ಗೆ ಏಕೆ ಚರ್ಚಿಸುತ್ತಿಲ್ಲ. ನಾವೆಲ್ಲ ಭಾಷಾ ಅಲ್ಪಸಂಖ್ಯಾತರು. ನಮ್ಮ ಬೇಡಿಕೆಗೆ ಮನ್ನಣೆ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ರಮೇಶ ಸೊಂಟಕ್ಕಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಶೇ.೭೦ ಕನ್ನಡ ಭಾಷಿಕರಿದ್ದಾರೆ. ಅಲ್ಲೆ ಏಕೆ ಕನ್ನಡ‌ ಭಾಷೆಯಲ್ಲಿ ದಾಖಲೆ ನೀಡುತ್ತಿಲ್ಲ. ಹಾಗಾಗಿ, ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿ ಕರೆಸಿ ಈ ಬಗ್ಗೆ ಮಾತಾಡುವಂತೆ ಸಲಹೆ ನೀಡಿದರು.

ಬಳಿಕ ಮೇಯರ್‌ ಮಂಗೇಶ ಪವಾರ ಮಾತನಾಡಿ, ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ 15 ದಿನದಲ್ಲಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ, ಬಳಿಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಭೆಗೆ ತಿಳಿಸಿದರು. ಉಪಮೇಯರ್ ವಾಣಿ ಜೋಶಿ, ಪಾಲಿಕೆ ವಿಪಕ್ಷ ನಾಯಕ ಸೋಯಿಲ್ ಸಂಗೊಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಪ್ಪು ಎಸಗಿದ್ದರೆ ದೂರು ನೀಡಬೇಕು. ಆಧಾರ ರಹಿತವಾಗಿ ಮಾತನಾಡುವುದು ಸರಿಯಲ್ಲ. ತಪ್ಪಾಗಿದ್ದರೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗೆ ದೂರು ನೀಡಬೇಕು. ಅದನ್ನು ಬಿಟ್ಟು ಈ ರೀತಿ ಏಕಾಏಕಿ ಮಾತನಾಡುವುದು ಸರಿಯಲ್ಲ. ಸೂಪರ್ ಸೀಡ್ ಮಾಡುವ ಬೆದರಿಕೆಗೆ ಬಗ್ಗಲ್ಲ. ಆಸೀಫ್ ಸೇಠ್, ಶಾಸಕ