ಹಕ್ಕುಪತ್ರ, ಪಹಣಿ ನೀಡಲು ಆಗ್ರಹ

| Published : Jun 07 2024, 12:32 AM IST

ಸಾರಾಂಶ

ಅರಣ್ಯ ಹಕ್ಕು ಕಾಯ್ದೆ ೨೦೦೬ರ ಅಡಿ ತಾಲೂಕಿನಲ್ಲಿ ೭,೦೦೯ ಅರ್ಜಿಗಳಲ್ಲಿ ಕೇವಲ ೨೪೭ ಕ್ಲೇಮುದಾರರಿಗೆ ವೈಯಕ್ತಿಕ ಅರಣ್ಯ ಜಮೀನಿನ ಹಕ್ಕು ಮಂಜೂರಾಗಿವೆ

ಮುಂಡಗೋಡ: ಜೀವನೋಪಾಯಕ್ಕಾಗಿ ಅನಾದಿ ಕಾಲದಿಂದ ಅರಣ್ಯ ಹಾಗೂ ಕಂದಾಯ ಜಮೀನು ಅವಲಂಬಿತರಿಗೆ ಅರಣ್ಯ ಹಕ್ಕು ಕಾಯ್ದೆ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯ ಹಕ್ಕುಪತ್ರ ಹಾಗೂ ಪಹಣಿ ಒದಗಿಸುವಲ್ಲಿ ಕ್ರಮ ಜರುಗಿಸಬೇಕೆಂದು ಮುಂಡಗೋಡ ತಾಲೂಕು ಭೂಹಕ್ಕುದಾರರ ಹಿತರಕ್ಷಣಾ ವೇದಿಕೆಯು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿತು.ಅರಣ್ಯ ಹಕ್ಕು ಕಾಯ್ದೆ ೨೦೦೬ರ ಅಡಿ ತಾಲೂಕಿನಲ್ಲಿ ೭,೦೦೯ ಅರ್ಜಿಗಳಲ್ಲಿ ಕೇವಲ ೨೪೭ ಕ್ಲೇಮುದಾರರಿಗೆ ವೈಯಕ್ತಿಕ ಅರಣ್ಯ ಜಮೀನಿನ ಹಕ್ಕು ಮಂಜೂರಾಗಿದ್ದು, ೩,೭೮೧ ಕ್ಲೇಮುಗಳು ಉಪವಿಭಾಗ ಮಟ್ಟದಲ್ಲಿ ತಿರಸ್ಕೃತಗೊಂಡಿದ್ದು, ಉಳಿದ ೨,೯೮೧ ಕ್ಲೇಮುಗಳು ಪರಿಶೀಲನೆಗೆ ಬಾಕಿ ಇದೆ ಎಂಬುದನ್ನು ವೇದಿಕೆ ಸಹಾಯಕ ಆಯುಕ್ತರ ಗಮನಕ್ಕೆ ತಂದಿತು.ಕಂದಾಯ ಜಮೀನಿನಲ್ಲಿಯ ಅನಧಿಕೃತ ಉಳುಮೆ ಮಾಡುತ್ತಿರುವ ೩೭೧ ಬಗರ್‌ಹುಕುಂ ರೈತರ ಅರ್ಜಿಗಳು, ಅನಧಿಕೃತ ವಾಸದ ಕಟ್ಟಡಗಳ ಸಕ್ರಮ ಕೋರಿ ಸಲ್ಲಿಸಿದ ೧೧೨ ಅರ್ಜಿಗಳು ಕಳೆದ ಐದು ವರ್ಷದಿಂದ ಲ್ಯಾಂಡ್ ಗ್ರಾಂಟ್ ಸಮಿತಿಯ ಅನುಮೋದನೆಗಾಗಿ ಕಾಯುತ್ತಿದ್ದು, 2023ರ ಡಿ. ೧ರ ಸರ್ಕಾರದ ಸುತ್ತೋಲೆಯನ್ವಯ ವಾರಕ್ಕೊಮ್ಮೆ ಸಭೆ ನಡೆಸಲು ತಹಸೀಲ್ದಾರರಿಗೆ ಸೂಚಿಸಲು ಒತ್ತಾಯಿಸಲಾಯಿತು.

ನಿಯೋಗದಲ್ಲಿ ವೇದಿಕೆಯ ಪದಾಧಿಕಾರಿಗಳಾದ ರತ್ನವ್ವಾ ವಾಲ್ಮಿಕಿ, ರಾಜಬೀ ಹುಲಕೊಪ್ಪ, ಬೊಮ್ಮಣ್ಣ ಹುಲಕೊಪ್ಪ, ಬಂಗಾರಿ ಗೊಲ್ಲರ, ಮುರಗುಂದಯ್ಯ ಕಂತೀಮಠ, ದತ್ತಾರಾಮ ಅಂಗಣೆ ಹಾಗೂ ಮುಂಡಗೋಡ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಅನಿಲ್ ಡಿಸೋಜಾ, ಸುರೇಶ ರಾಠೋಡ, ಸಿಸ್ಟರ್ ಮಾರಿಯಾ ಹಾಗೂ ನಾಗರಾಜ್ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.