ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್, ಜಿಲ್ಲಾಸ್ಪತ್ರೆಗಳಲ್ಲಿ ನರರೋಗ ತಜ್ಞ, ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ, ಹೋಬಳಿಗೊಂದು ಮುಖ್ಯಮಂತ್ರಿ ಜನೌಷಧಿ ಕೇಂದ್ರ ಸೇರಿದಂತೆ ಮಾಯಕೊಂಡ ಕ್ಷೇತ್ರದ ಜಲ್ವಂತ ಸಮಸ್ಯೆಗಳ ಬಗ್ಗೆ ಶಾಸಕ ಕೆ.ಎಸ್.ಬಸವಂತಪ್ಪ ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆಸಿದರು.ವಿಧಾನಸಭೆಯಲ್ಲಿ ಮಂಗಳವಾರ ಸಂಜೆ ಬಜೆಟ್ ಮೇಲಿನ ಚರ್ಚೆಯ ವೇಳೆ ಈ ವಿಷಯಗಳನ್ನು ಪ್ರಸ್ತಾಪಿಸಿದ ಶಾಸಕರು, ಮಾಯಕೊಂಡ ಕ್ಷೇತ್ರ, ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಕ್ಷೇತ್ರ. ಇಲ್ಲಿ ಅತೀ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಹಾಗೂ ರೈತರು ಇದ್ದಾರೆ. ಅನಾರೋಗ್ಯಕ್ಕೆ ತುತ್ತಾದರೆ, ಸಿಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಮಾಡಿಸಲು ಖಾಸಗಿ ಆಸ್ಪತ್ರೆಗಳಲ್ಲಿ 10 ಸಾವಿರ ರೂ. ಕೊಟ್ಟು ಮಾಡಿಸಬೇಕು. ಒಂದೊಪ್ಪತ್ತಿನ ಊಟಕ್ಕಾಗಿ ಪರದಾಡುವ ಜನರು ದುಬಾರಿ ಹಣ ನೀಡಿ ಮಾಡಿಸಲು ಆಗದೆ ದಿನನಿತ್ಯ ನರಳಿ ಜೀವನವೇ ಬೇಡ ಎಂಬ ಸ್ಥಿತಿಗೆ ಬರುತ್ತಾರೆ. ಇತ್ತೀಚೆಗೆ ಜನರಲ್ಲಿ ನರರೋಗ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಆದರೆ ಜಿಲ್ಲಾ ಆಸ್ಪತ್ರೆಗಳಲ್ಲಿ ನರರೋಗ ತಜ್ಞರಿಲ್ಲ. ಕೂಡಲೇ ನರರೋಗ ತಜ್ಞರನ್ನು ನೇಮಿಸಬೇಕು. ಅದೇ ರೀತಿ ಪಿಎಂ ಜನೌಷಧಿ ಕೇಂದ್ರದ ಮಾದರಿಯಲ್ಲಿ ಪ್ರತಿ ಹೋಬಳಿಗೊಂದು ಮುಖ್ಯಮಂತ್ರಿ ಜನೌಷಧಿ ಕೇಂದ್ರ ತೆರೆದು ರಿಯಾಯಿತಿ ದರದಲ್ಲಿ ಔಷಧಿ ಸಿಗುವ ವ್ಯವಸ್ಥೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ನನ್ನ ಕ್ಷೇತ್ರ ಕೃಷಿ ಆಧಾರಿತ ಕ್ಷೇತ್ರ. ಸಿರಿಗೆರೆ ಶ್ರೀಗಳ ಹೋರಾಟದ ಫಲದಿಂದ 22 ಕೆರೆಗಳ ಏತನೀರಾವರಿ ಯೋಜನೆ ಜಾರಿಗೆ ಬಂದಿತ್ತು. ಆದರೆ 22 ಕೆರೆಗಳ ಏತ ನೀರಾವರಿ ಯೋಜನೆಯ ಕಳಪೆ ಕಾಮಗಾರಿಯಿಂದ ಈವರೆಗೂ ಕೆರೆಗಳಿಗೆ ನೀರು ಬಂದಿಲ್ಲ. ಇದರ ಪರಿಣಾಮ ಅಂತರ್ಜಲ ಬತ್ತಿ, ಕುಡಿಯುವ ನೀರು, ರೈತರು ಅಡಿಕೆ, ಬಾಳೆ, ಪಪ್ಪಾಯಿ ಸೇರಿದಂತೆ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಈಗ ಹೊಸ ಪೈಪ್ ಲೈನ್ ಕಾಮಗಾರಿಗೆ ಸಿಎಂ, ಡಿಸಿಎಂ 75 ಕೋಟಿ ರೂ. ಹಣ ಮಂಜೂರು ಮಾಡಿಸಿದ್ದಾರೆ. ಆರ್ಥಿಕ ಇಲಾಖೆಯ ಅನುಮೋದನೆ ಹಂತದಲ್ಲಿದ್ದು, ವಿಳಂಬವಾಗುತ್ತಿದೆ. ಕೂಡಲೇ ಸರ್ಕಾರ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.ಅಷ್ಟೇ ಅಲ್ಲದೇ ರೈತರು ಅತೀ ಹೆಚ್ಚು ಮೆಕ್ಕೆಜೋಳ ಮತ್ತು ಭತ್ತ ಬೆಳೆಯುವ ಕ್ಷೇತ್ರ ನನ್ನದು. ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ಇಲ್ಲದೇ ರೈತರು ಎಷ್ಟೋ ಬಾರಿ ಮೆಕ್ಕೆಜೋಳ ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದ ಉದಾಹಣೆಗಳಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಆಹಾರ ಪಡಿತರ ವ್ಯವಸ್ಥೆಗೆ ತಂದು ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಪ್ರತಿ ವರ್ಷ ಭತ್ತ ಬೆಳೆದ ರೈತರು ಬೆಲೆ ಇಲ್ಲದೇ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಭತ್ತಕ್ಕೂ ವೈಜ್ಞಾನಿಕ ಬೆಲೆ ನೀಡಿ ಬೆಂಬಲ ಘೋಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 50ರಿಂದ 75 ವರ್ಷಗಳಿಂದ ಅರಣ್ಯ ಪ್ರದೇಶಗಳಲ್ಲಿ ಜನ ವಸತಿ ಇರಬಹುದು, ಉಳುಮೆ ಮಾಡುವ ಭೂಮಿ ಇರಬಹುದು. ಇಂತಹ ಜನರನ್ನು ಒಕ್ಕಲೆಬ್ಬಿಸದೆ ಕಾನೂನು ಬದ್ಧವಾಗಿ ಅವರನ್ನು ಕಾಪಾಡುವ ಮೂಲಕ ಅವರಿಗೆ ಹಕ್ಕುಪತ್ರ ನೀಡಬೇಕೆಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಲ್ಲಿ ಮನವಿ ಮಾಡಿದರು.
ಆನಗೋಡು ಮತ್ತು ತ್ಯಾವಣಿಗೆಯಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದ ಶಾಸಕರು, ಎಸ್ಸಿ-ಎಸ್ಟಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಿ ಅವರ ಶೈಕ್ಷಣಿಕ ವೃದ್ಧಿಗೆ ಆದ್ಯತೆ ನೀಡಿರುವ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು, ಆನಗೋಡಿಗೆ ಪೊಲೀಸ್ ಠಾಣೆ ಮಂಜೂರು ಮಾಡಿದ ಗೃಹ ಸಚಿವರು, ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಿದ ಆರೋಗ್ಯ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.