ಬನವಾಸಿಯಲ್ಲಿ ಕದಂಬ ಕನ್ನಡ ಜಿಲ್ಲೆಗೆ ಆಗ್ರಹಿಸಿ, ಡಿ. ೬ರಂದು ಬೃಹತ್‌ ಹೋರಾಟ

| Published : Nov 28 2024, 12:33 AM IST

ಬನವಾಸಿಯಲ್ಲಿ ಕದಂಬ ಕನ್ನಡ ಜಿಲ್ಲೆಗೆ ಆಗ್ರಹಿಸಿ, ಡಿ. ೬ರಂದು ಬೃಹತ್‌ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಬನವಾಸಿಯ ದೇವಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಕದಂಬ ಕನ್ನಡ ಜಿಲ್ಲೆಗಾಗಿ ಜನಜಾಗೃತಿ ಸಭೆಯಲ್ಲಿ ಸ್ಥಳೀಯ ಹಿರಿಕಿರಿಯ ಸಾಮಾಜಿಕ ಕಾರ್ಯಕರ್ತರು, ಪ್ರಮುಖರು, ಮುಖಂಡರು ಅಭಿಪ್ರಾಯ ಹಂಚಿಕೊಂಡು, ಸಲಹೆ- ಸೂಚನೆ ನೀಡಿದರು.

ಶಿರಸಿ: ಘಟ್ಟದ ಮೇಲಿನ ಏಳು ತಾಲೂಕುಗಳನ್ನು ಒಳಗೊಂಡು ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕು. ನೂತನವಾಗಿ ಕದಂಬ ಕನ್ನಡ ಜಿಲ್ಲೆಗೆ ನಮ್ಮ ಬನವಾಸಿ ಭಾಗದ ಸಂಪೂರ್ಣ ಬೆಂಬಲವಿದೆ. ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಹೋರಾಟಗಳು ನಡೆಯಬೇಕು. ಈ ಹಿನ್ನೆಲೆ ಡಿ. ೬ರಂದು ಬನವಾಸಿಯ ಮಧುಕೇಶ್ವರ ದೇವಾಲಯದಿಂದ ಬೃಹತ್ ಮೆರವಣಿಗೆ ಹೊರಟು, ಉಪತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲು ಒಕ್ಕೊರಲಾಗಿ ನಿರ್ಣಯ ಮಾಡಲಾಯಿತು.ಬನವಾಸಿಯ ದೇವಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಕದಂಬ ಕನ್ನಡ ಜಿಲ್ಲೆಗಾಗಿ ಜನಜಾಗೃತಿ ಸಭೆಯಲ್ಲಿ ಸ್ಥಳೀಯ ಹಿರಿಕಿರಿಯ ಸಾಮಾಜಿಕ ಕಾರ್ಯಕರ್ತರು, ಪ್ರಮುಖರು, ಮುಖಂಡರು ಅಭಿಪ್ರಾಯ ಹಂಚಿಕೊಂಡು, ಸಲಹೆ- ಸೂಚನೆ ನೀಡಿದರು.ಸಂಘಟನೆಯ ಎಂ.ಎಂ. ಭಟ್ಟ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಪ್ರತ್ಯೇಕ ಜಿಲ್ಲೆಯ ಕನಸು ಮೂರು ದಶಕದ ಹಿಂದೆಯೇ ಚಿಗುರಿತ್ತು. ಡಾ. ಸೋಂದೆ, ಎನ್.ಎಸ್. ಹೆಗಡೆ ಮಾಳೇನಳ್ಳಿ, ಉಪೇಂದ್ರ ಪೈ ಅವರ ನೇತೃತ್ವದಲ್ಲಿ ಕಳೆದ ೮- ೧೦ ವರ್ಷಗಳಿಂದ ನಡೆಯುತ್ತಿದೆ. ಕೆಲ ಕಾರಣಾಂತರದಿಂದ ಹೋರಾಟ ಕಳೆಗುಂದಿತ್ತು. ಇದೀಗ ಯುವಕರಾಗಿರುವ ಅನಂತಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಮತ್ತೆ ಹೋರಾಟಕ್ಕೆ ಬಲ ನೀಡಿ, ಆರಂಭಿಸಲಾಗಿದೆ. ಅನಂತಮೂರ್ತಿ ಅವರು ಸಂಘಟನೆಯನ್ನು ಮಾಡುವಲ್ಲಿ ದಕ್ಷರಾಗಿದ್ದಾರೆ. ಅವರಿಗಿರುವ ಹೋರಾಟದ ಪ್ರವೃತ್ತಿ, ಸ್ಪಷ್ಟ ಗುರಿ ಮತ್ತು ಸಂಘಟನಾ ಚಾತುರ್ಯ ಜಿಲ್ಲೆ ರಚನೆ ಹೋರಾಟಕ್ಕೆ ಬಲ ನೀಡುತ್ತದೆ ಎಂದರು.ಜಯಶೀಲ ಗೌಡರ್ ಮಾತನಾಡಿ, ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಇಂದಿನ ಪರಿಸ್ಥಿತಿ ನೋಡಿದರೆ ನಮಗೆ ನಾಚಿಕೆಯಾಗುತ್ತದೆ. ಬೇರೆ ಬೇರೆ ರಾಜ್ಯದಿಂದ, ವಿದೇಶಗಳಿಂದ ಪ್ರವಾಸಿಗರು ಬನವಾಸಿಗೆ ನಿತ್ಯ ಬರುತ್ತಾರೆ. ಆದರೆ ಬನವಾಸಿ ಮಾತ್ರ ಅಭಿವೃದ್ಧಿಯತ್ತ ಸಾಗುತ್ತಿಲ್ಲ. ಅಭಿವೃದ್ಧಿಗೆ, ಹೋರಾಟಕ್ಕೆ ಅಡ್ಡಗಾಲು ಹಾಕುವವರೇ ಜಾಸ್ತಿ. ಕದಂಬ ಕನ್ನಡ ಜಿಲ್ಲೆ ಹೋರಾಟದಲ್ಲಿ ನಾನು ಸಂತಸದಿಂದ ಭಾಗಿಯಾಗುತ್ತೇನೆ ಎಂದರು.

ಉದಯಕುಮಾರ ಕಾನಳ್ಳಿ ಮಾತನಾಡಿ, ಕದಂಬ ಕನ್ನಡ ಜಿಲ್ಲೆ ಹೆಸರಿನ ಮೂಲಕ ಬನವಾಸಿಯ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ಮೊದಲ ಪ್ರಯತ್ನಕ್ಕೆ ನನಗೆ ಖುಷಿಯಿದೆ. ಜಿಲ್ಲಾಕೇಂದ್ರ ಕಾರವಾರ ಬನವಾಸಿಯಿಂದ ೧೫೦ ಕಿಮೀ ದೂರದಲ್ಲಿದೆ. ನಮ್ಮ ಜನರ ಸಮಸ್ಯೆಗಳಿಗೆ ಕಾರವಾರದ ಜಿಲ್ಲಾಕೇಂದ್ರದಿಂದ ಪರಿಹಾರ ದೊರೆಯುವುದು ವಿಳಂಬವಾಗುತ್ತಿದೆ. ಈ ಕಾರಣಕ್ಕೆ ಒಕ್ಕೊರಲಾಗಿ ಕದಂಬ ಕನ್ನಡ ಜಿಲ್ಲೆಗಾಗಿ ಧ್ವನಿಗೂಡಿಸಬೇಕಿದೆ ಎಂದರು.ಸಾಮಾಜಿಕ ಕಾರ್ಯಕರ್ತ ರಮೇಶ ನಾಯ್ಕ, ಹಾಲಪ್ಪನವರ ಜಕ್ಕಣ್ಣನವರ್, ವಿರೂಪಾಕ್ಷ ನಾಯಕ್ ಭಾಶಿ ಸೇರಿದಂತೆ ಸಾರ್ವಜನಿಕರು ಕದಂಬ ಕನ್ನಡ ಜಿಲ್ಲೆ ಕುರಿತಾಗಿ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಉಮಾಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಭೆಯಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಸ್ಥಳೀಯ ಪ್ರಮುಖರಾದ ಜಯಶೀಲ ಗೌಡರ್, ಗಣೇಶ ಸಣ್ಣಲಿಂಗಣ್ಣನವರ್, ಉದಯಕುಮಾರ ಕಾನಳ್ಳಿ, ಹಾಲಪ್ಪ ಜಕ್ಕಣ್ಣನವರ್, ಅರವಿಂದ ಶೆಟ್ಟಿ, ಮಂಜುನಾಥ ಪಾಟೀಲ್, ಪ್ರೇಮಕುಮಾರ ನಾಯ್ಕ, ಮೃತ್ಯುಂಜಯ ದಾವಣಗೆರೆ, ರಮೇಶ ನಾಯ್ಕ, ವಿಶ್ವನಾಥ ಹಾದಿಮನೆ, ಶೋಭಕ್ಕ ಸೇರಿದಂತೆ ಪ್ರಮುಖರು ಇದ್ದರು.

ಬನವಾಸಿ ತಾಲೂಕು ಕೇಂದ್ರವಾಗಲಿಬನವಾಸಿಯಲ್ಲಿ ನಡೆದ ಕದಂಬ ಕನ್ನಡ ಜಿಲ್ಲೆ ಜನಜಾಗೃತಿ ಸಭೆಯಲ್ಲಿ ಒಕ್ಕೊರಲಾಗಿ ಜಿಲ್ಲೆ ರಚನೆಗೆ ಬೆಂಬಲ ನೀಡಿದರು. ಆದರೆ ಇದೇ ವೇಳೆ ಬನವಾಸಿ ತಾಲೂಕು ರಚನೆಗಾಗಿಯೂ ಆಗ್ರಹ ಮಾಡಬೇಕೆಂಬ ಮಾತುಗಳ ಜನರಿಂದ ಕೇಳಿಬಂದವು. ಕದಂಬ ಕನ್ನಡ ಜಿಲ್ಲಾ ರಚನೆ ಟ್ರಸ್ಟ್‌ನ ಬೈಲಾದಲ್ಲಿಯೇ ಬನವಾಸಿ ತಾಲೂಕನ್ನಾಗಿಸುವ ಅಜೆಂಡಾ ಇರುವುದು ಎಂದಾಗ ಸಭೆ ಚಪ್ಪಾಳೆ ಮೂಲಕ ಪೂರ್ಣ ಸಹಕಾರ ನೀಡುವುದಾಗಿ ಘೋಷಣೆ ಮಾಡಿತು.