ಉದ್ದೇಶಿತ ಬಂದರು ನಿರ್ಮಾಣ ಕೈಬಿಡಲು ಕಾಗೇರಿಗೆ ಆಗ್ರಹ

| Published : Feb 24 2025, 12:35 AM IST

ಸಾರಾಂಶ

ಮೀನುಗಾರರ ಹಿತ ರಕ್ಷಣೆಗೆ ಮುಂದಾಗಬೇಕೆಂದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹೊನ್ನಾವರ: ತಾಲೂಕಿನ ಕಾಸರಕೋಡಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಖಾಸಗಿ ಕಂಪನಿ ನೇತೃತ್ವದ ಬಂದರು ನಿರ್ಮಾಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಾಸರಕೋಡಿನ ಮೀನುಗಾರರ ನಿಯೋಗ ಆಗ್ರಹಿಸಿದೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈಚೆಗೆ ಹೊನ್ನಾವರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಪರಿಸರ, ಜೀವ ವೈವಿಧ್ಯತೆ, ಪರಂಪರಾಗತ ಮೀನುಗಾರಿಕೆ, ಮೀನುಗಾರರ ವಸತಿಗಳಿಗೆ, ಮೀನುಗಾರರ ಜೀವನೋಪಾಯಕ್ಕೆ ತೊಂದರೆ ಇರುವ ಆತಂಕದ ಹಿನ್ನೆಲೆಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡಬೇಕು. ಮೀನುಗಾರರ ಹಿತ ರಕ್ಷಣೆಗೆ ಮುಂದಾಗಬೇಕೆಂದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮೀನುಗಾರರ ನ್ಯಾಯಯುತ ಪ್ರತಿಭಟನೆ ಹತ್ತಿಕ್ಕುವ ಕೆಲಸ ಆಗುತ್ತಿದೆ. ಸರ್ವಾಧಿಕಾರಿ ಧೋರಣೆಯ ಮುಖಾಂತರ ಮೀನುಗಾರರ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಲಾಗುತ್ತಿದೆ. ಮುನ್ನೂರಕ್ಕೂ ಅಧಿಕ ಮನೆಗಳನ್ನು ನೆಲಸಮಗೊಳಿಸುವ ಬಗ್ಗೆ ಹಾಗೂ ಸ್ಥಳೀಯರಿಗೆ ವಿವಿಧ ಆಮಿಷ ಒಡ್ಡಿರುವುದು ಮತ್ತು ಈ ಹೋರಾಟದಲ್ಲಿ ತೊಡಗಿಕೊಂಡವರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿ ಕಿರುಕುಳ ನೀಡಲಾಗುತ್ತಿದೆ. ಹೋರಾಟಗಾರರ ಮೇಲೆ ಹಾಕಿದ ಪ್ರಕರಣ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮೀನುಗಾರರ ಅಳಲು ಆಲಿಸಿ ಸಂಸದನಾಗಿ ನನ್ನಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದರು.

ಮೀನುಗಾರರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ ಜಿ. ತಾಂಡೇಲ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.