ಸಾರಾಂಶ
ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ಮತ್ತು ಕನ್ನಡ ಶಾಲೆಗಳ ರಕ್ಷಣೆಗೆ ವಿಧಿಸಿದ ಷರತ್ತು ಸಡಿಲಗೊಳಿಸುವ ಜತೆಗೆ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು.
ವಿವಿಧ ಸಂಘಟನೆಗಳ ಪ್ರತಿಭಟನೆ, ತಹಸೀಲ್ದಾರ್ ಜಿ.ಸಂತೋಷಕುಮಾರಗೆ ಮನವಿ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನ ಮತ್ತು ಕನ್ನಡ ಶಾಲೆಗಳ ರಕ್ಷಣೆಗೆ ವಿಧಿಸಿದ ಷರತ್ತು ಸಡಿಲಗೊಳಿಸುವ ಜತೆಗೆ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು.ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಮಾತನಾಡಿ, ಕಳೆದ 9-10 ವರ್ಷಗಳಿಂದ ಕರ್ನಾಟಕದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚುವುದಕ್ಕೆ ಸರ್ಕಾರದ ವಿಪರೀತ ಕಠಿಣ ನಿಯಮಗಳು ಕಾರಣವಾಗಿದ್ದು,. ಇವುಗಳಿಂದ ಕನ್ನಡ ಶಾಲೆಗಳು ಸೊರಗುತ್ತಿವೆ. ಇವತ್ತು ನಮ್ಮ ಮಾತೃಭಾಷೆ ಉಳಿಯಬೇಕು. ಕನ್ನಡ ಉಳಿಯಬೇಕು. ಅಂದರೆ ಕನ್ನಡ ಶಾಲೆಗಳ ಸಮಗ್ರ ವಿಕಾಸವಾಗಬೇಕು. ಇದು ಸರ್ಕಾರದ ಮುಖ್ಯ ಧ್ಯೇಯವಾಗಿರಬೇಕಿದೆ ಎಂದರು.
ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕರ್ನಾಟಕದ ಮಟ್ಟಿಗೆ ಬಹಳ ಚಿಂತಾಜನಕ ಸಂಗತಿ. ಹಲವಾರು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರದ ನೂರಾರು ನಿಯಮಗಳಿಂದ ಸೋತು ಸುಣ್ಣವಾಗಿವೆ. ಶಾಲೆಗಳನ್ನು ನಡೆಸಲು ಆಗದ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳ ಮಾರಣ ಹೋಮ ಆಗುತ್ತಿದೆ ಎಂದು ಹೇಳಿದರು.ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಸರ್ಕಾರ ಕನ್ನಡ ಶಾಲೆಗಳ ಸಬಲೀಕರಣ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ. 1995ರ ನಂತರ ಪ್ರಾರಂಭವಾದ ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನಕ್ಕೊಳಪಡಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೇ ಸರಳಗೊಳಿಸಬೇಕು. ಕನ್ನಡ ಶಾಲೆಗಳು ಪ್ರಾರಂಭಿಸಲು ಷರತ್ತುಗಳು ಸರಳಿಕರಣಗೊಳಿಸಬೇಕು. ಬಡ ಮಕ್ಕಳಿಗೆ ದಾರಿದೀಪವಾದ ಆರ್‌ಟಿಇ ಖಾಸಗಿ ಶಾಲೆಗಳಿಗೆ ಮರು ಜಾರಿ ಮಾಡಬೇಕು,ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಬೇಕು, 371(ಜೆ) ಕಾನೂನಡಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಶಾಲೆಗಳಿಗೆ ಕೊಡಿ, ರಾಜ್ಯಾದ್ಯಾದಂತ ಅನಧಿಕೃತ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಬೇಕು, ಕನ್ನಡ ಶಾಲೆಗಳನ್ನು ರಕ್ಷಿಸಿ ಕನ್ನಡವನ್ನು ಉಳಿಸಬೇಕು, ಕನ್ನಡ ಶಾಲೆಗಳನ್ನು ಬಂದ್ ಮಾಡಿ. ಕರ್ನಾಟಕ ಪಬ್ಲಿಕ್ ಶಾಲೆ (ಇಂಗ್ಲಿಷ್ ಮಾಧ್ಯಮ) ಪ್ರಾರಂಭಿಸುತ್ತಿರುವುದನ್ನು ಕೈಬೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಸಂಘಟನೆಯ ಜಾವೀದ್, ಸಂಜಯ್ ಸೇರಿದಂತೆ ಇತರರು ತಹಸೀಲ್ದಾರ್ ಜಿ.ಸಂತೋಷಕುಮಾರಗೆ ಮನವಿ ಸಲ್ಲಿಸಿದರು.