ನಿಗದಿತ ಸ್ಥಳದಲ್ಲೇ ಕೆಎಸ್ಸಾರ್ಟಿಸಿ ಬಸ್‌ ನಿಲುಗಡೆಗೆ ಆಗ್ರಹ

| Published : Oct 30 2025, 01:45 AM IST

ನಿಗದಿತ ಸ್ಥಳದಲ್ಲೇ ಕೆಎಸ್ಸಾರ್ಟಿಸಿ ಬಸ್‌ ನಿಲುಗಡೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷ ಎಚ್‌.ಎ.ಗದ್ದಿಗೇಶ್ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷ ಎಚ್‌.ಎ.ಗದ್ದಿಗೇಶ್ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಗ್ಯಾರಂಟಿ ಯೋಜನಾ ಅನುಷ್ಠಾನ ಸದಸ್ಯ ಮಂಜುನಾಥ ಮಾಳಕ್ಕಿ ಮಾತನಾಡಿ, ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳು ರಾತ್ರಿ ವೇಳೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಾರದೇ ಪಟ್ಟಣದಿಂದ ಒಂದು ಕಿ.ಮೀ. ದೂರವಿರುವ ಟಿ.ಬಿ. ವೃತ್ತದ ದೇವನಾಯ್ಕನಹಳ್ಳಿ ಬಳಿ ಇರುವ ನಿಲುಗಡೆಯಲ್ಲಿ ನಿಲ್ಲಿಸಿ ಮುಂದೆ ಸಾಗುತ್ತವೆ. ಇದರಿಂದ ಪಟ್ಟಣದ ಪ್ರಯಾಣಿಕರಿಗೆ ಅದರಲ್ಲೂ ಮಹಿಳೆಯರಿಗೆ, ವೃದ್ದರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ ಈ ಸಮಸ್ಯೆಯನ್ನು ಕೆಎಸ್‌ಆರ್‌ಟಿಸಿ ಬಸ್ ಡಿಪೋ ವ್ಯವಸ್ಥಾಪಕರು ಕೂಡಲೇ ಸರಿ ಮಾಡಬೇಕು ಎಂದು ಹೇಳಿದರು.

ಶಿವಮೊಗ್ಗ ಹಾಗೂ ಹರಿಹರ ಕಡೆಯಿಂದ ಹೊನ್ನಾಳಿ ಪಟ್ಟಣಕ್ಕೆ ಆಗಮಿಸುವ ಎಲ್ಲಾ ರಸ್ತೆ ಸಾರಿಗೆ ಬಸ್‌ಗಳು ರಾತ್ರಿ ವೇಳೆ ತಮ್ಮ ಬಸ್ ನಿಲ್ದಾಣಕ್ಕೆ ಬಂದು ನಿಲುಗಡೆ ಮಾಡಿ ಮುಂದೆ ಸಾಗಬೇಕು. ಆದರೆ ಪಟ್ಟಣದಿಂದ ದೂರ ಇರುವ ಟಿ.ಬಿ. ವೃತ್ತದಲ್ಲಿಯೇ ಪಟ್ಟಣದ ಪ್ರಯಾಣಿಕರನ್ನು ಕೆಳಗಿಳಿಸಿ ಮುಂದೆ ಹೋಗುತ್ತಾರೆ ಎಂದರು.

ಇದಕ್ಕೆ ಧ್ವನಿಗೂಡಿಸಿ ಮತ್ತೊಬ್ಬ ಗ್ಯಾರಂಟಿ ಯೋಜನಾ ಅನುಷ್ಠಾನ ಸದಸ್ಯ ಪ್ರಶಾಂತ ಬಣ್ಣಜ್ಜಿ ಮಾತನಾಡಿ, ನನಗೆ ಇದರ ಅನುಭವಾಗಿದ್ದು, ಈಚೆಗೆ ನಾನು ಶಿವಮೊಗ್ಗದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಟ್ಟಣಕ್ಕೆ ಬಂದಾಗ ತಡರಾತ್ರಿಯಾಗಿತ್ತು, ಮಧ್ಯರಾತ್ರಿಯಾಗಿದೆ, ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಿ ಎಂದು ಮನವಿ ಮಾಡಿದಾಗ, ಬಸ್‌ನ ಕಂಡಕ್ಟರ್ ಹಾಗೂ ಡ್ರೈವರ್ ಕೇಳಲಿಲ್ಲ, ಕೊನೆ ಪಕ್ಷ ಖಾಸಗಿ ಬಸ್ ನಿಲ್ದಾಣಕ್ಕಾದರೂ ಬಸ್ ಹೋಗಲಿ ಎಂದರೂ ಕೇಳದೆ ನಮ್ಮನ್ನು ಟಿ.ಬಿ.ವೃತ್ತದ ಬಳಿ ಇಳಿಸಿ ಹೋದರು ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಪಟ್ಟಣದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ರಾಮಚಂದ್ರಪ್ಪ ಉತ್ತರಿಸಿ, ವೇಗದೂತ ಬಸ್‌ಗಳ ಚಾಲಕರು ಹಾಗೂ ಬೇರೆ ವಿಭಾಗದ ಬಸ್ ಚಾಲಕರು ಈ ರೀತಿಯಲ್ಲಿ ಸಂಚರಿಸುತ್ತಿದ್ದಾರೆ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೆ ತಾಲೂಕಿನಿಂದ ಒಟ್ಟು1,13,92,586 ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.

ಬೆಸ್ಕಾಂ ಎಇಇ ಜಯಪ್ಪ ಗೃಹಜ್ಯೋತಿ ಯೋಜನೆ ಬಗ್ಗೆ ಮಾತನಾಡಿ, ಸಿಡಿಪಿಒ ಇಲಾಖೆ ಜ್ಯೋತಿಯವರು ಗೃಹಲಕ್ಷ್ಮಿ ಯೋಜನೆ ಬಗ್ಗೆ, ಆಹಾರ ಇಲಾಖೆ ಅಧಿಕಾರಿ ಸಂಜಯ್ ಆಹಾರ ಪಡಿತರ ವಿತರಣೆ ಹಾಗೂ ಯುವನಿಧಿ, ಶಕ್ತಿ ಯೋಜನೆ ಕುರಿತು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ ತಮ್ಮ ಇಲಾಖೆಗಳ ಸಾಧನ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸದಸ್ಯರಾದ ಎಚ್‌.ಬಿ.ಅಣ್ಣಪ್ಪ, ಜೆ.ಆಶಾ, ಶೋಭಾ, ಮಂಜುನಾಥ, ಪ್ರಶಾಂತ್‌, ಶಿವಮೂರ್ತಿ, ಕೃಷ್ಣಾಚಾರ್, ರಂಗಪ್ಪ, ರುದ್ರೇಶ್‌, ಶೇಖರಪ್ಪ, ತಾಪಂ ಇಒ ಪ್ರಕಾಶ್ ಇದ್ದರು.