ಸೀಬರ್ಡ್ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಗಳು ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ಭೂ ಪರಿಹಾರಕ್ಕೆ ಸಂಬಂಧಿಸಿದ 18 ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದು, ಸುಮಾರು 165 ಪ್ರಕರಣಗಳು ಉಪ ಆಯುಕ್ತರ ಕಚೇರಿಯಲ್ಲಿ ಇತ್ಯರ್ಥಕ್ಕಾಗಿ ಕಾಯುತ್ತಿವೆ.

ಕಾರವಾರ: ಸೀಬರ್ಡ್ ಯೋಜನೆಯಿಂದ ನಿರಾಶ್ರಿತರಾದವರಿಗೆ ನ್ಯಾಯ ಒದಗಿಸುವುದು, ಕಾರವಾರ- ಅಂಕೋಲಾದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಸ್ಥಾಪಿಸುವುದು ಹಾಗೂ ಕಾರವಾರ- ಕೈಗಾ ಭಾಗದ ಮೂಲ ಸೌಕರ್ಯ ಮತ್ತು ಉದ್ಯೋಗ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಭಾನುವಾರ ಕಾರವಾರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ 3 ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದ್ದಾರೆ.ಜಿಲ್ಲೆಯ ದಶಕಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು, ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಸೀಬರ್ಡ್ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಗಳು ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ಭೂ ಪರಿಹಾರಕ್ಕೆ ಸಂಬಂಧಿಸಿದ 18 ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದು, ಸುಮಾರು 165 ಪ್ರಕರಣಗಳು ಉಪ ಆಯುಕ್ತರ ಕಚೇರಿಯಲ್ಲಿ ಇತ್ಯರ್ಥಕ್ಕಾಗಿ ಕಾಯುತ್ತಿವೆ ಎಂದು ಉಲ್ಲೇಖಿಸಿದ್ದಾರೆ.ಕಾರವಾರ- ಕೈಗಾ ಭಾಗದ ಜನರ ಸಂಚಾರ ಮತ್ತು ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಕಾರವಾರ- ಅಂಕೋಲಾದಲ್ಲಿ ಐಐಟಿ ಸ್ಥಾಪನೆಗೆ ಒತ್ತಾಯಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ತಾಂತ್ರಿಕ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕಾರವಾರ- ಅಂಕೋಲಾ ಪ್ರದೇಶದಲ್ಲಿ ಐಐಟಿ ಸ್ಥಾಪಿಸಬೇಕು ಎಂದು ರೂಪಾಲಿ ನಾಯ್ಕ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ- 66 ಹಾಗೂ ರೈಲು ಸಂಪರ್ಕ ಹೊಂದಿರುವ ಈ ಪ್ರದೇಶವು ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಐಐಟಿ ಸ್ಥಾಪನೆಯಾದರೆ ಸಂಶೋಧನೆ, ನವೋದ್ಯಮ, ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.