ರಾಣಿಬೆನ್ನೂರು: ಹಿಂದೂ ಧರ್ಮ, ಶ್ರೀರಾಮ ಹಾಗೂ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹೇಳಿಕೆ ನೀಡಿರುವ ಪ್ರೊ. ಕೆ. ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹರಿಹರದಲ್ಲಿ ಇತ್ತೀಚಿಗೆ ಪ್ರೊ. ಕೆ.ಎಸ್. ಭಗವಾನ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಪ್ರಭು ಶ್ರೀರಾಮರ ಕುರಿತು ಆಧಾರರಹಿತ ಆರೋಪಗಳನ್ನು ಮಾಡುವುದರ ಜೊತೆಗೆ ಹಿಂದೂ ಧರ್ಮದ ನಂಬಿಕೆಗಳು, ಧಾರ್ಮಿಕ ಆಚರಣೆಗಳು ಮತ್ತು ದೇವತೆಗಳ ಕುರಿತು ಅವಮಾನಕಾರಿಯಾಗಿ ಮಾತನಾಡಿರುವುದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ಹಾಗೂ ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಬೆಳೆಸುವ ಸಾಧ್ಯತೆಯನ್ನು ಹೊಂದಿವೆ. ಹಿಂದೆಯೂ ಅವರ ವಿರುದ್ಧ ವಿವಿಧೆಡೆ ದೂರುಗಳು ದಾಖಲಾಗಿರುವ ವರದಿಗಳು ಪ್ರಕಟವಾಗಿವೆ. ಆದಾಗ್ಯೂ ಅವರು ಪುನಃ ಪುನಃ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪ್ರಯತ್ನವೆಂದು ಕಂಡುಬರುತ್ತದೆ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ನೀಡಿದ್ದರೂ, ಯಾವುದೇ ಧರ್ಮ, ದೇವತೆ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವ ಹಕ್ಕನ್ನು ನೀಡಿಲ್ಲ. ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಅಪಾಯವನ್ನುಂಟುಮಾಡುತ್ತವೆ. ಆದ್ದರಿಂದ ಪ್ರೊ. ಕೆ. ಎಸ್. ಭಗವಾನ್ ಅವರು ಕಾರ್ಯಕ್ರಮದಲ್ಲಿ ನೀಡಿರುವ ಭಾಷಣದ ಸಂಪೂರ್ಣ ವಿಡಿಯೋ, ಧ್ವನಿಮುದ್ರಣ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಅವರ ವಿರುದ್ಧ ಅನ್ವಯವಾಗುವ ಕಾನೂನು ವಿಧಿಗಳಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕೃಷ್ಣಾಸಾ ಪವಾರ, ವೆಂಕಟರಮಣ ನಾಯಕ್, ಶಿವಕುಮಾರ ಹಿರೇಮಠ, ಸಂಜೀವ ಕೊಪ್ಪದ, ಪ್ರಶಾಂತ ಉದಗಟ್ಟಿ, ಸೋಮರೆಡ್ಡಿ ಯರೆಕುಪ್ಪಿ ಮತ್ತಿತರರಿದ್ದರು.