ಧಾರ್ಮಿಕ ಕೇಂದ್ರಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಕ್ಕೆ ಒತ್ತಾಯ

| Published : Apr 03 2025, 12:32 AM IST

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವಾದ ಏ.14ರಿಂದಲೇ ಅನ್ವಯವಾಗುವಂತೆ ಇಡೀ ದೇಶಾದ್ಯಂತ ಎಲ್ಲಾ ಮಠ-ಮಂದಿರ, ಚರ್ಚ್‌, ಮಸೀದಿ, ಮದರಸಾಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲು ಆದೇಶಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವುದಾಗಿ ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಆರ್.ಸೂರ್ಯಪ್ರಕಾಶ ತಿಳಿಸಿದರು.

ಸುದ್ದಿಗೋಷ್ಠಿ । ಕರ್ನಾಟಕ ಭೀಮ್‌ ಸೇನೆಯ ಸೂರ್ಯಪ್ರಕಾಶ್‌ ಆಗ್ರಹ । ಮಠ, ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಬಳಸುವಂತೆ ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವಾದ ಏ.14ರಿಂದಲೇ ಅನ್ವಯವಾಗುವಂತೆ ಇಡೀ ದೇಶಾದ್ಯಂತ ಎಲ್ಲಾ ಮಠ-ಮಂದಿರ, ಚರ್ಚ್‌, ಮಸೀದಿ, ಮದರಸಾಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲು ಆದೇಶಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವುದಾಗಿ ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಆರ್.ಸೂರ್ಯಪ್ರಕಾಶ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ ವಿಶಿಷ್ಟವಾದ ಸ್ವಾತಂತ್ರ್ಯ, ಸಮಾನತೆ, ಮೂಲಭೂತ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಕೊಡಿಸಿದಂತಹ ಮಹಾನ್ ನಾಯಕ ಅಂಬೇಡ್ಕರ್‌ರ ಭಾವಚಿತ್ರವನ್ನು ದೇಶಾದ್ಯಂತ ಮಠ, ಮಂದಿರ, ಚರ್ಚ್‌, ಮಸೀದಿಗಳು, ಮದರಸಾಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ಸರ್ಕಾರಗಳು ಆದೇಶ ಹೊರಡಿಸಬೇಕು ಎಂದರು.

ಸಂವಿಧಾನದ 25ನೇ ವಿಧಿಯಿಂದ 28ನೇ ವಿಧಿವರೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದ್ದು, ಸಂವಿಧಾನದ 29ನೇ ವಿಧಿಯಿಂದ 31(ಡಿ)ನೇ ವಿಧಿವರೆಗೂ ಸಾಂಸ್ಕೃತಿಕ ಶೈಕ್ಷಣಿಕ ಹಕ್ಕುಗಳನ್ನು ನೀಡಿದ್ದಾರೆ. ಸಂಘ-ಸಂಸ್ಥೆಗಳನ್ನು ನಡೆಸುತ್ತಿರುವ ಅದೆಷ್ಟೋ ಮಠ, ಮಂದಿರ, ಮಸೀದಿ, ಮದರಸಾ, ಚರ್ಚ್‌ಗಳ ಗೋಡೆಗಳ ಮೇಲೆ ಎಲ್ಲಿಯೂ ಸಹ ಬಾಬಾ ಸಾಹೇಬ್ ಬಿ. ಆರ್.ಅಂಬೇಡ್ಕರ್ ಭಾವಚಿತ್ರ ಹಾಕಿಲ್ಲ ಎಂದರು.

ಅಂಬೇಡ್ಕರ್ ಜನ್ಮದಿನವಾದ ಏ.14ರಂದು ಸರ್ಕಾರಿ ಅಧಿಕಾರಿಗಳು, ನೌಕರರು, ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿ ಗೈರಾಗದೇ, ಕಡ್ಡಾಯವಾಗಿ ಹಾಜರಾಗಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಒಂದು ವೇಳೆ ಯಾವುದೇ ಅಧಿಕಾರಿ, ನೌಕರರು ಗೈರಾದರೆ ಅಂತಹವರ ಹೆಸರನ್ನು ಪಟ್ಟಿ ಮಾಡಿ, ತಿಂಗಳ ವೇತನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಮಹಾತ್ಮರ ಜಯಂತಿಯನ್ನು ಕಾಟಾಚಾರಕ್ಕೆ ಮಾಡದೇ, ಗೌರವಯುತವಾಗಿ, ಅರ್ಥಪೂರ್ಣವಾಗಿ ಮಾಡಬೇಕು ಎಂದು ತಿಳಿಸಿದರು.

ವೇದಿಕೆಯನ್ನು ನಿರ್ಮಿಸಿ, ಏ.14ರಂದು ವಿಶೇಷ ಉಪನ್ಯಾಸ, ಸನ್ಮಾನ ಕಾರ್ಯಕ್ರಮ ರೂಪಿಸಿ, ದಲಿತ ಪರ ಸಂಘಟನೆಗಳ ಮುಖಂಡರು, ದಲಿತ ಪರ ಚಿಂತಕರು, ಹೋರಾಟಗಾರರ ಸಹಕಾರ ಪಡೆದು, ಜನ ಜಾಗೃತಿ ಮೂಡಿಸಬೇಕು. ಅಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಅಧಿಕಾರಿ, ನೌಕರರು ಅಂಬೇಡ್ಕರ್ ಜಯಂತಿ ಆಚರಿಸಿ, ಅಲ್ಲಿಂದ 8.30ಕ್ಕೆ ಸರಿಯಾಗಿ ಪಾಲಿಕೆ ಮುಂಭಾಗದ ಪಿಬಿ ರಸ್ತೆಯನ್ನು ಹಾದು ಹೋಗಿ, ಗಾಂಧಿ ವೃತ್ತದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿವರೆಗೆ ಪಥ ಸಂಚಲನ ಮಾಡಬೇಕು ಎಂದು ಮನವಿ ಮಾಡಿದರು.

ಬಾಬಾ ಸಾಹೇಬ್‌ರ ಪುತ್ಥಳಿ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಭಾಗಿತ್ವದೊಂದಿಗೆ, ಜನ ಸಾಮಾನ್ಯರಿಂದ ಹಿಡಿದು, ಸಂಘ-ಸಂಸ್ಥೆಗಳ ಮುಖಂಡರವರೆಗೆ ಹಾಗೂ ರಾಜಕೀಯ ಹೊರತುಪಡಿಸಿ, ಎಲ್ಲಾ ಮುಖಂಡರು, ಮಹಿಳೆಯರು, ಮಂದಿರ ಮಸೀದಿಗಳು, ಚರ್ಚ್‌ಗಳ ಪೌರೋಹಿತ್ಯ ವಹಿಸಿರುವ ಮುಖಂಡರು ಸಮಿತಿ ಸದಸ್ಯರೊಂದಿಗೆ ಭಾಗಿಯಾಗಲುಕ್ರಮ ಕೈಗೊಳ್ಳಬೇಕು. ಬಾಬಾ ಸಾಹೇಬರ ಭಾವಚಿತ್ರದ ಮೆರವಣಿಗೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಮುಖಂಡರಾದ ಎನ್.ಸಂತೋಷ, ಮೈಲಾರಿ, ಮಂಜಾನಾಯ್ಕ, ರಾಕೇಶ ಇತರರು ಇದ್ದರು.