10 ದಿನಗಳೊಳಗೆ ನಿಯಮಬಾಹಿರ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡಕ್ಕೆ ಆದ್ಯತೆ ನೀಡಿದ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕಾನೂನುಬದ್ಧ ಹೋರಾಟ, ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಹಳಿಯಾಳ: ಪಟ್ಟಣದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ) ಕಾಯ್ದೆ- 2024ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಅನ್ಯ ಭಾಷೆಯ ನಾಮಫಲಕಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಆಗ್ರಹಿಸಿದೆ.

ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಅನ್ಯ ಭಾಷೆಯ ನಾಮಫಲಕಗಳ ಕಂಡು ರೋಸಿ ಹೋದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದವರು ಶನಿವಾರ ಪಟ್ಟಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಸರ್ಕಾರದ ಆದೇಶದಂತೆ ವಾಣಿಜ್ಯ ಸಂಸ್ಥೆಗಳು, ಅಂಗಡಿ- ಮಳಿಗೆಗಳ ನಾಮಫಲಕಗಳಲ್ಲಿ ಕನಿಷ್ಠ ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿದ್ದು, ಕನ್ನಡ ಅಕ್ಷರಗಳು ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ಕಾಣಬೇಕು ಎಂದು ನಿರ್ದೇಶಿಸಲಾಗಿದೆ. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದರೂ ಹಳಿಯಾಳ ಪಟ್ಟಣದಲ್ಲಿ ಅನೇಕ ಸಂಸ್ಥೆಗಳು ನಿಯಮ ಪಾಲಿಸದೆ ಅನ್ಯ ಭಾಷೆಯ ನಾಮಫಲಕಗಳನ್ನು ಮುಂದುವರಿಸಿವೆ. ಇದು ಕಾಯ್ದೆಯ ನೇರ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಮುಖಂಡರು, ಮುಂದಿನ 10 ದಿನಗಳೊಳಗೆ ನಿಯಮಬಾಹಿರ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡಕ್ಕೆ ಆದ್ಯತೆ ನೀಡಿದ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಕಾನೂನುಬದ್ಧ ಹೋರಾಟ, ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯ ಮುಂದಾಳತ್ವವನ್ನು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ವಹಿಸಿದ್ದರು. ಪದಾಧಿಕಾರಿಗಳಾದ ವಿಜಯ ಪಡ್ನಿಸ, ಚಂದ್ರಕಾಂತ ದುರ್ವೆ, ವಿನೋದ ದೊಡ್ಡಮನಿ, ಮಹೇಶ್ ಆನೆಗುಂದಿ, ರೈತ ಘಟಕದ ಅಧ್ಯಕ್ಷ ಸುರೇಶ್ ಕೊಕಿತಕರ, ರಾಮಾ ಜಾವಳೆಕರ, ಸುಧಾಕರ ಕುಂಬಾರ, ಚಂದ್ರು ಅರಶಿಣಗೇರಿ, ಅಶೋಕ ಪಾಟೀಲ, ವಿನೋದ ಗಿಂಡೆ, ಸಂತೋಷ ದಂಡಿ, ವಿಜಯ ಕಾಳೆ, ರಮೇಶ್ ತೊರಲೆಕರ, ತಿಪ್ಪಣ್ಣ ಕಲಗುಡಿ, ರಾಮು ಹಗರಿ, ಸದಾ ಮುನವಳ್ಳಿ, ರಾಜು ತೊರಲೆಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.