ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ನಡೆಸುತ್ತಿರುವ ಧರಣಿ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ನಡೆಸುತ್ತಿರುವ ಧರಣಿ ಮುಂದುವರಿದಿದೆ.

ಬುಧವಾರ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಓಬಿಸಿ ಮೋರ್ಚಾ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ, ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಸಚಿವ ನಾಗೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸತ್ಯಾಗ್ರಹಕ್ಕೂ ಮುನ್ನ ಭಾರತಮಾತೆ ಹಾಗೂ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ರೂ. ಅವ್ಯವಹಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ ವಿರುದ್ಧ ಗಂಭೀರ ಆರೋಪಗಳಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.

ರೂಪಾಲಿ ಎಸ್. ನಾಯ್ಕ ಮಾತನಾಡಿ, ವಾಲ್ಮೀಕಿ ಮಹರ್ಷಿ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ನಿಗಮದಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿರುವುದು ಖಂಡನೀಯ. ಸಚಿವ ನಾಗೇಂದ್ರ ವಿರುದ್ಧ ಈ ಹಿಂದೆಯೂ ಬಿಜೆಪಿ ಹೋರಾಟ ನಡೆಸಿದ್ದು, ಅದರ ಪರಿಣಾಮವಾಗಿ ಅವರು ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದು ಸರ್ಕಾರ ಭ್ರಷ್ಟರನ್ನು ಪೋಷಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ಕೂಡಲೇ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ದೇಶ, ನೆಲ-ಜಲ ಹಾಗೂ ರಾಷ್ಟ್ರದ ಮೌಲ್ಯಗಳ ಬಗ್ಗೆ ಗೌರವವಿಲ್ಲ ಎಂದು ಆರೋಪಿಸಿದರು.

ಮಾಜಿ ಸಚಿವ ಹರತಾಳ ಹಾಲಪ್ಪ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುವ ಕಾಂಗ್ರೆಸ್ ಸರ್ಕಾರ ತನ್ನ ಸಚಿವರ ವಿರುದ್ಧದ ಆರೋಪಗಳ ವಿಚಾರದಲ್ಲಿ ಮೃದು ಧೋರಣೆ ತಾಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಓಬಿಸಿ ಮೋರ್ಚಾದ ರಾಜೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ, ಪ್ರಭಾರಿಗಳಾದ ಗಜಾನನ ಗುನಗಾ ಮತ್ತು ರಾಜು ಭಂಡಾರಿ, ವಕ್ತಾರ ಜಗದೀಶ ನಾಯಕ ಮೊಗಟಾ, ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಮಾಧ್ಯಮ ಸಹ ಸಂಚಾಲಕ ಕಿಶನ ಕಾಂಬಳೆ, ರಾಜ್ಯ ಪ್ರಕೋಷ್ಟದ ಸುನಿಲ್ ಸೋನಿ, ಜಿಲ್ಲಾ ಉಪಾಧ್ಯಕ್ಷರಾದ ಸಂಜಯ ಸಾಳುಂಕೆ ಹಾಗೂ ನಿತ್ಯಾನಂದ ಗಾಂವ್ಕರ್ ಸೇರಿದಂತೆ ವಿವಿಧ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ಧರಣಿ ಸ್ಥಳದಲ್ಲಿ ಮೂಲಸೌಕರ್ಯಕ್ಕೆ ಮನವಿ

ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಪ್ರತಿಭಟನಾಕಾರರಿಗಾಗಿ ವಿದ್ಯುದ್ದೀಪದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಇತರೆ ಜಿಲ್ಲೆಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದ್ದು, ಕಾರವಾರದಲ್ಲಿಯೂ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವಿದ್ಯುದ್ದೀಪದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.