ಸಾರಾಂಶ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ವ್ಯವಸ್ಥೆ ಗೊಂದಲದ ಗೂಡಾಗಿ ಪರಿಣಮಿಸಿದೆ. ನಾಗರೀಕರಿಂದ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಆರೋಪಿಸಿ, ಯುವ ಕಾಂಗ್ರೆಸ್ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ವ್ಯವಸ್ಥೆ ಗೊಂದಲದ ಗೂಡಾಗಿ ಪರಿಣಮಿಸಿದೆ. ನಾಗರೀಕರಿಂದ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಆರೋಪಿಸಿ, ಯುವ ಕಾಂಗ್ರೆಸ್ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಇತ್ತೀಚೆಗೆ ರಾಜ್ಯ ಸರ್ಕಾರವು, ಎಲ್ಲ ನಗರ - ಪಟ್ಟಣ ಸ್ಥಳೀಯಾಡಳಿತಗಳಲ್ಲಿ ಇ-ಆಸ್ತಿ ವ್ಯವಸ್ಥೆ ಕಾರ್ಯಗತಗೊಳಿಸಿದೆ.
ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಸ್ಥಿರಾಸ್ತಿ ನೊಂದಣಿ, ಬ್ಯಾಂಕ್ ಗಳಲ್ಲಿ ಸಾಲ ಪಡೆಯುವುದು ಸೇರಿದಂತೆ ನಾನಾ ಆಡಳಿತಾತ್ಮಕ ಕೆಲಸಕಾರ್ಯಗಳಿಗೆ ಸ್ಥಿರಾಸ್ತಿಗೆ ಪಾಲಿಕೆಯ ಇ- ಆಸ್ತಿ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕಾರಣದಿಂದ ಇ-ಆಸ್ತಿ ಮಾಡಿಸಲು ನಾಗರೀಕರು ಪಾಲಿಕೆಗೆ ದೌಡಾಯಿಸುತ್ತಿದ್ದಾರೆ. ಆದರೆ, ಪಾಲಿಕೆಯ ಕಂದಾಯ ವಿಭಾಗದಲ್ಲಿ, ಇ-ಆಸ್ತಿಯ ಬಗ್ಗೆ ನಾಗರೀಕರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕಂದಾಯ ವಿಭಾಗದದ ಮುಖ್ಯಸ್ಥರೇ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪಾಲಿಕೆಗೆ ಭೇಟಿ ನೀಡಬೇಕು. ಕಂದಾಯ ಇಲಾಖೆ ಅಧಿಕಾರಿಗಳ ಬಳಿಯಿರುವ ಕಡತಗಳ ಖುದ್ದು ಪರಿಶೀಲನೆ ನಡೆಸಬೇಕು. ಇ-ಆಸ್ತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲಿಸಬೇಕು. ಹಣಕ್ಕೆ ಬೇಡಿಕೆಯಿಡುತ್ತಿರುವ ಪಾಲಿಕೆ ಕಂದಾಯ ವಿಭಾಗದ ಮುಖ್ಯಸ್ಥರ ವಿರುದ್ಧ ಕ್ರಮಕೈಗೊಳ್ಳಬೆಕು ಎಂದು ಒತ್ತಾಯಿಸಿದರು.ಪ್ರಸ್ತುತ ಕಂದಾಯ ವಿಭಾಗದ ಉಪ ಆಯುಕ್ತರು, ನಿಯಮಕ್ಕೆ ವಿರುದ್ಧವಾಗಿ ಹುದ್ದೆಯಲ್ಲಿರುವ ದೂರುಗಳಿವೆ. ಈ ಕುರಿತಂತೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್, ನಗರಾಧ್ಯಕ್ಷ ಬಿ. ಲೋಕೇಶ್, ಎಸ್. ಕುಮಾರೇಶ್, ಪ್ರಧಾನ ಕಾರ್ಯದರ್ಶಿ ರಾಹುಲ್, ಪುಷ್ಪಕ್ ಕುಮಾರ್, ಮೋಹನ್, ರಾಕೇಶ್ ಮತ್ತಿತರರು.