ಕೆಎಎಸ್‌ ಅಧಿಕಾರಿಗೆ ಹಣಕ್ಕಾಗಿ ಬೇಡಿಕೆ:ಅಬ್ರಾಹಂ ವಿರುದ್ಧ ಚಾರ್ಜ್‌ಸೀಟ್‌ ಸಲ್ಲಿಕೆ

| Published : Aug 07 2024, 01:32 AM IST

ಕೆಎಎಸ್‌ ಅಧಿಕಾರಿಗೆ ಹಣಕ್ಕಾಗಿ ಬೇಡಿಕೆ:ಅಬ್ರಾಹಂ ವಿರುದ್ಧ ಚಾರ್ಜ್‌ಸೀಟ್‌ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಕೆಎಎಸ್‌ ಅಧಿಕಾರಿ ಡಾ। ಬಿ.ಸುಧಾ ಅವರಿಗೆ ಹಣಕ್ಕೆ ಬೇಡಿಕೆ ಇರಿಸಿದ, ನಿಂದಿಸಿದ ಆರೋಪದ ಪ್ರಕರಣದ ಆರೋಪಿಗಳಾದ ಟಿ.ಜೆ.ಅಬ್ರಹಾಂ ಮತ್ತು ಸುನೀಲ್‌ ವಿರುದ್ಧ ಜೀವನಭೀಮಾನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹಿಳಾ ಕೆಎಎಸ್‌ ಅಧಿಕಾರಿ ಡಾ। ಬಿ.ಸುಧಾ ಅವರಿಗೆ ಹಣಕ್ಕೆ ಬೇಡಿಕೆ ಇರಿಸಿದ, ನಿಂದಿಸಿದ ಆರೋಪದ ಪ್ರಕರಣದ ಆರೋಪಿಗಳಾದ ಟಿ.ಜೆ.ಅಬ್ರಹಾಂ ಮತ್ತು ಸುನೀಲ್‌ ವಿರುದ್ಧ ಜೀವನಭೀಮಾನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ಕೆಎಎಸ್‌ ಅಧಿಕಾರಿ ಡಾ। ಬಿ.ಸುಧಾ ಅವರು ನೀಡಿದ ದೂರಿನ ಮೇರೆಗೆ ಅಬ್ರಹಾಂ ಮತ್ತು ಸುನೀಲ್ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು, ಇದೀಗ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಅವರು ಕೆಎಎಸ್‌ ಅಧಿಕಾರಿ ಡಾ। ಬಿ.ಸುಧಾ ಅವರ ವಿರುದ್ಧ ಭ್ರಷ್ಟ್ರಾಚಾರ ಆರೋಪದಡಿ ಲೋಕಾಯುಕ್ತ ಮತ್ತು ಎಸಿಬಿಗೆ ದೂರು ನೀಡಿದ್ದರು. ಈ ದೂರುಗಳ ಸಂಬಂಧ ಯಾವುದೇ ತೊಂದರೆ ನೀಡದಿರಲು ಮಧ್ಯವರ್ತಿ ಸುನೀಲ್ ಮುಖಾಂತರ ಡಾ। ಬಿ.ಸುಧಾ ಅವರ ಬಳಿ ಒಂದು ಕೋಟಿ ಹಣಕ್ಕೆ ಬೇಡಿಕೆ ಇರಿಸಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಖಾಸಗಿ ಸುದ್ದಿ ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆ ಸಹ ನಡೆಸಿತ್ತು. ಈ ಸಂಬಂಧ ಡಾ। ಸುಧಾ ಅವರು ನೀಡಿದ ದೂರಿನ ಮೇರೆಗೆ 2023ರ ಆ.1ರಂದು ಜೀವನಭೀಮಾನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ತಮ್ಮ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಇಬ್ಬರು ಆರೋಪಿಗಳು ಬಂಧನದ ಭೀತಿಯಲ್ಲಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ತನಿಖೆ ವೇಳೆ ಆರೋಪಿಗಳು ಡಾ। ಸುಧಾ ಅವರಿಗೆ ಕರೆ ಮಾಡಿದ್ದ ಹಣಕ್ಕೆ ಬೇಡಿಕೆ ಇರಿಸಿದ್ದ ಕಾಲ್‌ ರೆಕಾರ್ಡ್‌ಗಳು, ಖಾಸಗಿ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆಯ ವಿಡಿಯೋಗಳು, ಆರೋಪಿಗಳ ದನಿ ಮಾದರಿ ಪರೀಕ್ಷೆಯ ಎಫ್‌ಎಸ್‌ಎಲ್‌ ವರದಿ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಈ ಬಗ್ಗೆ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.