ನಾರಾಯಣಗೌಡರ ಬಿಡುಗಡೆಗೆ ಕರವೇ ಆಗ್ರಹ

| Published : Dec 30 2023, 01:15 AM IST / Updated: Dec 30 2023, 01:16 AM IST

ಸಾರಾಂಶ

ರಾಮನಗರ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಬಂಧನ ಖಂಡಿಸಿ ಹಾಗೂ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಬಂಧನ ಖಂಡಿಸಿ ಹಾಗೂ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಕಬ್ಬಾಳೇಗೌಡ ನೇತೃತ್ವದಲ್ಲಿ ಐಜೂರು ವೃತ್ತದಲ್ಲಿ ಜಮಾಯಿಸಿದ ವೇದಿಕೆಯ ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ಪೊಲೀಸರ ಕ್ರಮ ಖಂಡಿಸಿ ಘೋಷಣೆ ಕೂಗಿದರು.

ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಡಿ. 27ರಂದು ಬೆಂಗಳೂರಿನಲ್ಲಿ ಬೃಹತ್ ನಾಮಫಲಕ ರ್‍ಯಾಲಿ ಮೂಲಕ ಜಾಗೃತಿ ಅಭಿಯಾನ ಕೈಗೊಂಡು ಶಾಂತಿಯುತವಾಗಿ ನಡೆಸುತ್ತಿದ್ದ ರ್‍ಯಾಲಿಗೆ ಪೊಲೀಸರ ಅನುಮತಿ ನೀಡದೇ ಕನ್ನಡಪರ ಹೋರಾಟಗಾರರನ್ನು ಬಂಧಿಸುವುದು ಸರಿಯಲ್ಲ ಎಂದು ಖಂಡಿಸಿದರು.

ಸರ್ಕಾರ ಕನ್ನಡ ಸಂಘಟನೆಗಳ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಅನ್ಯ ಭಾಷೆಗಳ ನಾಮಫಲಕಗಳು ಅದರಲ್ಲೂ ಇಂಗ್ಲಿಷ್ ನಾಮಫಲಕಗಳು ವಿಜೃಂಭಿಸುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಕಾನೂನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ನಾಮಫಲಕ ಅಳವಡಿಸಿಕೊಂಡವರ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ. ಕನ್ನಡ ಹೋರಾಟಗಾರರನ್ನು ರೊಚ್ಚಿಗೇಳಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ ಕಿಡಿಕಾರಿದರು.

ಕೂಡಲೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಜೊತೆಗೆ ಸಂಘಟನೆ ಮುಖಂಡರನ್ನು ಬಿಡುಗಡೆ ಮಾಡಬೇಕು, ಕನ್ನಡಪರ ಸಂಘಟನೆ ಮುಖಂಡರ ಮೇಲೆ ಹೂಡಿರುವ ಎಲ್ಲಾ ಮೊಕದ್ದಮೆಗಳನ್ನು ಸರ್ಕಾರ ಇಂದೇ ವಾಪಸ್ ಪಡೆಯಬೇಕು. ಕೂಡಲೇ ನಿಯಮಾನುಸಾರ ಸರ್ಕಾರದ ಮಾರ್ಗಸೂಚಿಯಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಮನಗರ ತಾಲೂಕು ಅಧ್ಯಕ್ಷ ದೇವರಾಜು, ಕನಕಪುರ ತಾಲೂಕು ಅಧ್ಯಕ್ಷ ಜಯರಾಮೇಗೌಡ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಕೆ.ಆರ್.ಶ್ರೀನಿವಾಸ್, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಸಾಗರ್, ಜಿಲ್ಲಾ ರೈತಘಟಕ ಅಧ್ಯಕ್ಷ ನಾಗವಾರ ಶಂಭೂಗೌಡ, ಮುಖಂಡರಾದ ಭೀಮಲಿಂಗೇಗೌಡ, ಶಿವರಾಜ್‌ಗೌಡ, ಹರೀಶ್, ಆನಂದ್, ಪರಮೇಶ್, ರವಿ, ಶ್ರೀನಿವಾಸ್, ಜಯರಾಮ್, ರವಿಕುಮಾರ್, ಚನ್ನಪಟ್ಟಣ ಯುವಘಟಕ ಅಧ್ಯಕ್ಷ ನಿತಿನ್ ಇತರರಿದ್ದರು.

ಪೊಟೋ೨೯ಸಿಪಿಟಿ೩:

ರಾಮನಗರದ ಐಜೂರು ವೃತ್ತದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.