ಸಾರಾಂಶ
-ನಿತಿನ್ ಘಡ್ಕರಿಗೆ ಮನವಿ ಸಲ್ಲಿಸಿದ ಸಂಸದ ಗೋವಿಂದ ಕಾರಜೋಳ
------ಕನಡಪ್ರಭ ವಾರ್ತೆ, ಚಿತ್ರದುರ್ಗ
ಚಿತ್ರದುರ್ಗದಿಂದ (ರಾಷ್ಟ್ರೀಯ ಹೆದ್ದಾರಿ-48) ಚಳ್ಳಕೆರೆ-ಪಾವಗಡ-ಪೆನುಕೊಂಡ-ಪುಟ್ಟಪರ್ತಿ ಮಾರ್ಗವಾಗಿ ಆಂದ್ರಪ್ರದೇಶದ ಬುಕ್ಕಪಟ್ಟಣಂ (ರಾಷ್ಟ್ರೀಯ ಹೆದ್ದಾರಿ-342)ವರೆಗಿನ ಅಂದಾಜು 178.71 ಕಿಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದಜೇಗೇರಿಸಿ ಘೋಷಿಸುವಂತೆ ಸಂಸದ ಗೋವಿಂದ ಕಾರಜೋಳ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಕೋಟೆನಾಡು ಚಿತ್ರದುರ್ಗದಿಂದ ಪ್ರಾರಂಭವಾಗುವ ಈ ರಾಜ್ಯ ಹೆದ್ದಾರಿ ಕರ್ನಾಟಕದಲ್ಲಿ 119 ಕಿಮೀ ಹಾಗೂ ಆಂಧ್ರಪ್ರದೇಶದಲ್ಲಿ 58.90 ಕಿಮೀ ಸಾಗುತ್ತದೆ. ಈ ಮಾರ್ಗದಲ್ಲಿ ಬರುವ ಚಳ್ಳಕೆರೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಇಸ್ರೋ, ಡಿಆರ್ ಡಿಓ, ಬಾಬಾ ಆಟೋಮಿಕ್ ರೀಸರ್ಚ್ ಸೆಂಟರ್ ಸೇರಿದಂತೆ ಹಲವು ರಕ್ಷಣ ಇಲಾಖೆಗೆ ಸಂಬಂಧಿಸಿದ ಕೇಂದ್ರಗಳು 8,073 ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಚಳ್ಳಕೆರೆ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿದೆಯಲ್ಲದೇ ಇತರೆ ಕೃಷಿ ಉತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿ ಹೆಸರುಗಳಿಸಿದೆ.
ಈ ಮಾರ್ಗದಲ್ಲಿ ಬರುವ ಪಾವಗಡದಲ್ಲಿ ಪ್ರಪಂಚದ 3ನೇ ಅತಿ ದೊಡ್ಡ ಸೋಲಾರ್ ಪಾರ್ಕ್ ತಲೆ ಎತ್ತಿದೆ. 13,000 ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾರ್ಕ್ 2,050 ಮೆ.ವ್ಯಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಅಂದಾಜು 14,800 ಕೋಟಿಯಷ್ಟು ಅನುದಾನವನ್ನು ಇದಕ್ಕಾಗಿ ವಿನಿಯೋಗಿಸಲಾಗಿದೆ.ಚಿತ್ರದುರ್ಗದಿಂದ ಚಳ್ಳಕೆರೆ ಮಾರ್ಗವಾಗಿ ಬುಕ್ಕಪಟ್ಟಣಂ ವರೆಗಿನ ರಾಜ್ಯ ಹೆದ್ದಾರಿಯನ್ನು 2016 ರಲ್ಲಿಯೇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಹೆದ್ದಾರಿ ಸಚಿವಾಲಯ ತಾತ್ವಿಕ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿ ಹಾಗೂ ಅಂದಾಜು ಪಟ್ಟಿಯನ್ನು 2018 ರಲ್ಲಿಯೇ ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ 2022 ರಲ್ಲಿಯೇ ನಿರಾಕ್ಷೇಪಣಾ ಪತ್ರ ಹಾಗೂ ಕಾರ್ಯಸಾಧ್ಯತಾ ವರದಿಯನ್ನು ನೀಡಿದೆ. ಚಿತ್ರದುರ್ಗದಿಂದ ಚಳ್ಳಕೆರೆ-ಪಾವಗಡ-ಪೆನುಕೊಂಡ-ಪುಟ್ಟಪರ್ತಿ ಮಾರ್ಗವಾಗಿ ಆಂದ್ರಪ್ರದೇಶದ ಬುಕ್ಕಪಟ್ಟಣಂವರೆಗಿನ 178.71 ಕಿಮೀ ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿ ಅಭಿವೃದ್ದಿಪಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಗಡ್ಕರಿ ಅವರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.
----------------ಪೋಟೋ.......
ಸಂಸದ ಗೋವಿಂದ ಕಾರಜೋಳ ದೆಹಲಿಯಲ್ಲಿ ಹೆದ್ದಾರಿ ಸಚಿವ ನಿತಿನ್ ಘಡ್ಕರಿ ಭೇಟಿಯಾಗಿ ಚಿತ್ರದುರ್ಗದಿಂದ ಚಳ್ಳಕೆರೆ-ಪಾವಗಡ-ಪೆನುಕೊಂಡ-ಪುಟ್ಟಪರ್ತಿ- ಬುಕ್ಕಪಟ್ಟಣಂವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವಂತೆ ಮನವಿ ಸಲ್ಲಿಸಿದರು.----
ಪೋಟೋ: 26 ಸಿಟಿಡಿ5