ವೇತನದ ಬಾಕಿ ಹಾಗೂ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರು, ಗ್ರಂಥಾಲಯ ಮೇಲ್ವಿಚಾರಕರ ಸಂಘದ ನೇತೃತ್ವದಲ್ಲಿ ಸೋಮವಾರ ಜಿಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಂಥಾಲಯ ಮೇಲ್ವಿಚಾರಕರಿಂದ ಧರಣಿ ಎಚ್ಚರಿಕೆ: ಜಿಪಂ ಸಿಇಒಗೆ ಮನವಿ

ಕನ್ನಡಪ್ರಭ ವಾರ್ತೆ ಕಾರವಾರ

ವೇತನದ ಬಾಕಿ ಹಾಗೂ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳ ಮೇಲ್ವಿಚಾರಕರು, ಗ್ರಂಥಾಲಯ ಮೇಲ್ವಿಚಾರಕರ ಸಂಘದ ನೇತೃತ್ವದಲ್ಲಿ ಸೋಮವಾರ ಜಿಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಕನಿಷ್ಠ ವೇತನದ ವ್ಯತ್ಯಾಸದ ಮೊತ್ತ 2025ರ ಏಪ್ರಿಲ್‌ನಿಂದ ಸುಮಾರು 17 ತಿಂಗಳಿಂದ ಬಾಕಿ ಉಳಿದಿದೆ. ಅರಿವು ಕೇಂದ್ರಗಳ ಮೇಲ್ವಿಚಾರಕರು ಪರಿಷ್ಕೃತ ಕನಿಷ್ಠ ವೇತನಕ್ಕೆ ಅರ್ಹರಾಗಿದ್ದರೂ ಈವರೆಗೆ ಪೂರ್ಣ ಪ್ರಮಾಣದ ವೇತನ ನೀಡಲಾಗುತ್ತಿಲ್ಲ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಮೇಲ್ವಿಚಾರಕರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ, ಮೇಲ್ವಿಚಾರಕರನ್ನು ಭವಿಷ್ಯನಿಧಿ ಯೋಜನೆಗೆ ಒಳಪಡಿಸುವಂತೆ ಆದೇಶವಿದ್ದರೂ ಜಿಲ್ಲೆಯಲ್ಲಿ ಈ ಸೌಲಭ್ಯವನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿಲ್ಲ. ಉಡುಪಿ, ಶಿವಮೊಗ್ಗ ಹಾಗೂ ಕಲಬುರಗಿ ಸೇರಿ ಕೆಲವು ಜಿಲ್ಲೆಗಳಲ್ಲಿ ಪಿಎಫ್ ಸೌಲಭ್ಯ ನೀಡಲಾಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಸೌಲಭ್ಯ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದರು.

ನಿವೃತ್ತರಾದ ಮೇಲ್ವಿಚಾರಕರಿಗೆ ಗೌರವಧನ ಪಾವತಿಯೂ ಆಗುತ್ತಿಲ್ಲ. ಈ ಬಗ್ಗೆ ವಿಚಾರಿಸಿದಾಗ ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಿದೆ ಎಂಬ ಉತ್ತರ ನೀಡಲಾಗುತ್ತಿದೆ. ಆದರೆ ಇದುವರೆಗೆ ಯಾವುದೇ ಪಾವತಿ ಆಗಿಲ್ಲ ಎಂದು ಮೇಲ್ವಿಚಾರಕರು ತಿಳಿಸಿದರು. ಗ್ರಂಥಾಲಯ ಮೇಲ್ವಿಚಾರಕರನ್ನು ಪಂಚಾಯಿತಿ ಸಿಬ್ಬಂದಿ ಎಂದು ಹೇಳಲಾಗುತ್ತಿದ್ದರೂ, ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದಾಗ ಈ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಲ್ವಿಚಾರಕರು ಕಡಿಮೆ ಆದಾಯದಲ್ಲಿ ಜೀವನ ನಡೆಸುತ್ತಿದ್ದು, ವಯೋವೃದ್ಧ ತಂದೆ-ತಾಯಿಗಳ ಆರೈಕೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬದ ಅಗತ್ಯಗಳನ್ನು ಪೂರೈಸಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ 17 ತಿಂಗಳ ವೇತನ ವ್ಯತ್ಯಾಸದ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವುದರೊಂದಿಗೆ ಪ್ರತಿ ತಿಂಗಳು ಪೂರ್ಣ ಪ್ರಮಾಣದ ವೇತನ ನೀಡಬೇಕು ಎಂದು ಆಗ್ರಹಿಸಿದರು.

2019ರಿಂದ ಬಾಕಿ ಇರುವ ಪ್ರತಿ ಗ್ರಂಥಾಲಯದ ಸ್ವಚ್ಛತಾ ಹಾಗೂ ಸಾದಿಲ್ವಾರ ವೆಚ್ಚವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಎದುರು ಸಾಂಕೇತಿಕ ಧರಣಿ ನಡೆಸಲಾಗಿದ್ದು, ಬೇಡಿಕೆಗಳ ಕುರಿತು ಜಿಲ್ಲಾಡಳಿತ ಲಿಖಿತ ಭರವಸೆ ನೀಡಬೇಕು. ನಿಗದಿತ ಅವಧಿಯಲ್ಲಿ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನದಿಂದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಿಇಒ ಪರವಾಗಿ ಜಿಪಂ ಉಪಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು.

ಸಂಘದ ಅಧ್ಯಕ್ಷ ಜಿ.ಕೆ. ಗೌಡ, ರಾಜ್ಯ ಸಂಘದ ಪದಾಧಿಕಾರಿ ನಾಗರಾಜ ಶೆಟ್ಟಿ, ಜಿಲ್ಲಾ ಸಂಘದ ಪದಾಧಿಕಾರಿ ಚಂದ್ರು ನಾಯ್ಕ ಗೇರುಸೊಪ್ಪ, ಹಳಿಯಾಳ ತಾಲ್ಲೂಕಾಧ್ಯಕ್ಷ ರಾಜೇಶ ನಾಯ್ಕ ಸದಸ್ಯರಾದ ಗೋಪಾಲ ನಾಯ್ಕ ಜಲವಳ್ಳಿ, ಸಂಧ್ಯಾ ಹೆಗಡೆ ಸಂತೇಗುಳಿ, ಗೀತಾ ಭಟ್ ಸಿದ್ದಾಪುರ, ಸರೋಜಾ ನಾಯ್ಕ ಇತರರಿದ್ದರು.