ಸಾರಾಂಶ
-ಯಾದಗಿರಿಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದಿಂದ ಬೃಹತ್ ಪ್ರತಿಭಟನೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಬಿಸಿಯೂಟ ಯೋಜನೆಯಡಿಯಲ್ಲಿ ದುಡಿಯುವ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಲೋಕಸಭಾ ಸದಸ್ಯರ ಆಪ್ತ ಸಹಾಯಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಸಂಘಟನೆ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಅವರು, ಬಿಸಿಯೂಟ ಯೋಜನೆಯಲ್ಲಿ ದುಡಿಯುವ ನೌಕರರು ಕೇವಲ 3,600 ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. 2014ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚು ಮಾಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವು 26 ಸಾವಿರ ರು.ಗಳಿಗೆ ಗೌರಧನ ಹೆಚ್ಚಿಸಬೇಕು. ಕೆಲಸದ ಸಮಯದಲ್ಲಿ ನೌಕರರು ಮರಣ ಹೊಂದಿದರೆ 25 ಲಕ್ಷ ಪರಿಹಾರ ಧನ ಕೊಡಬೇಕು. ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಬದಲಾಯಿಸಬೇಕು. ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಯಾವುದೇ ಕಾರಣವಿಲ್ಲದೆ ಸ್ಥಳೀಯ ಹಿತಾಸಕ್ತಿಗಳಿಗಾಗಿ ನೌಕರರನ್ನು ಕೆಲಸದಿಂದ ಕೈ ಬಿಡಬಾರದು. ಈ ನೌಕರರ ವೇತನವನ್ನು ರಕ್ಷಣೆ ಹೆಚ್ಚಿಸಬೇಕು. ಇವರನ್ನು ಡಿ ಗ್ರೂಪ್ ನೌಕರರಾಗಿ ಗುರುತಿಸಬೇಕು. ಬಿಸಿಯೂಟ ನೌಕರರಿಗೆ 12 ತಿಂಗಳು ಕೆಲಸ ತಿಂಗಳಿಗೆ 26 ಸಾವಿರ ರು.ಗಳು ಕಡಿಮೆ ಇಲ್ಲದೆ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿಯ ಸಂಚಾಲಕ ಶಾಹಿದ ಬೇಗಂ ಮಾತನಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾದ ದಿನದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಗೈರು ಹಾಜರಿ ತಡೆಗಟ್ಟಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಈಗ ಸೇವೆಯಿಂದ ತೆಗೆದು ಹಾಕಲಾಗಿದೆ ಹಾಗೂ ಎನ್‌ಜಿಒಗಳಿಗೆ ಬಿಸಿಯೂಟ ಯೋಜನೆಯನ್ನು ನೀಡುತ್ತಿರುವುದನ್ನು ನೋಡಿದರೆ ಸರ್ಕಾರ ನಮ್ಮ ಮೇಲೆ ಗದಾ ಪ್ರಹಾರ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
ಸಂಘದ ಸಂಘಟನೆಯ ಸಂಚಾಲಕ ಸುರೇಖಾ ಕುಲಕರ್ಣಿ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ದೂರವಾಗಿಸುವಲ್ಲಿ ಅಕ್ಷರ ದಾಸೋಹ ಯೋಜನೆ ಜಾರಿಗೆ ತರಲಾಯಿತು. ಯೋಜನೆ ಆರಂಭಗೊಂಡಾಗಿನಿಂದಲೂ ಉತ್ತಮವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಸಾವಿವಾರು ಲಕ್ಷಾಂತರ ನೌಕರರಿಗೆ ಉದ್ಯೋಗವಕಾಶ ದೊರೆತಂತಾಗಿದೆ. ಇದನ್ನು ಮತ್ತಷ್ಟು ವೃದ್ಧಿಪಡಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರವು ಯೋಜನೆಯನ್ನು ಖಾಸಗೀಕರಣ ಗೊಳಿಸಲು ಮುಂದಾಗಿರುವದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದರು.ಸಂಘದ ಸಂಘಟನಾ ಸಂಚಾಲಕಿ ಈರಮ್ಮ ಹಯ್ಯಾಳ್ಕರ್ ಮಾತನಾಡಿದರು. ಸಿಐಟಿಯು ಜಿಲ್ಲಾ ಮುಖಂಡರಾದ ಬಸಲಿಂಗಮ್ಮ ನಾಟೇಕಾರ, ಸಂಘದ ರಾಜ್ಯ ಸಮಿತಿ ಸದಸ್ಯ ಸುನಂದ ಹಿರೇಮಠ, ಸಂಘದ ಗೌರವಾಧ್ಯಕ್ಷ ಪ್ರಕಾಶ ಆಲ್ದಾಳ, ಸಂಘದ ಜಿಲ್ಲಾ ಸಂಘಟನಾ ಸಂಚಾಲಕಿ ಹನುಮಂತಿ ಮೌರ್ಯ, ಸೌಭಾಗ್ಯ ಮಾಲಗತ್ತಿ, ಮಂಜುಳಾ ಹೊಸಮನಿ, ಜಯಶ್ರೀ, ಮಂಜುಳಾ ದೇವಾಪುರ, ಲಾಲ್ ಬಿ, ಜಯಶ್ರೀ ಕೆಂಭಾವಿ, ರೇಣುಕಾ ನಾರಾಯಣಪುರ, ದೇವಮ್ಮ ಕೊಡೆಕಲ್ ಇದ್ದರು.
--- ಬಾಕ್ಸ್--ಪೊಲೀಸ್ ಅಧಿಕಾರಿ ಅಮಾನತಿಗೆ ಮನವಿ
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶಾಂತಿಯುತವಾಗಿ ಅಂಗನವಾಡಿ ನೌಕರರ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯ ಮುಖಂಡರನ್ನು ಬಲವಂತವಾಗಿ ಎಳೆದುಕೊಂಡು ಹೋದ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತ ಗೊಳಿಸಬೇಕು ಎಂದು ಪ್ರತಿಭಟನೆಕಾರರು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.-----
ಫೋಟೊ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯಾದಗಿರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.20ವೈಡಿಆರ್3