ಸಾರಾಂಶ
ರಾಣಿಬೆನ್ನೂರು: ಸೇವಾ ಕಾಯಂಯಾತಿ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬುಧವಾರ ನಗರದಲ್ಲಿ ಗ್ರೇಡ್- 2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಆಶಾ, ಅಂಗನವಾಡಿ, ಬಿಸಿಯೂಟ ಮತ್ತು ಇತರ ಸ್ಕೀಂ ವರ್ಕರ್‌ಗಳ ಸೇವೆಯನ್ನು ಕಾಯಂ ಮಾಡಿ ಅಲ್ಲಿಯವರೆಗೆ- ಐಎಲ್‌ಸಿ ಶಿಫಾರಸ್ಸಿನಂತೆ ಸ್ಕೀಂ ಕಾರ್ಯಕರ್ತೆಯರನ್ನು ಕಾರ್ಮಿಕರು ಅಂತಾ ಪರಿಗಣಿಸಿ ಕನಿಷ್ಠ ₹28,000 ಮಾಸಿಕ ವೇತನ ನೀಡಬೇಕು. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ರಾಜ್ಯಸಭೆಗೆ ನೀಡಿರುವ ಮಾಹಿತಿಯಂತೆ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸ್ಟೀರಿಂಗ್ ಗ್ರೂಪ್ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನವನ್ನು ಹೆಚ್ಚಿಸಲು ಕೇಂದ್ರದಿಂದ ಆದೇಶಿಸಬೇಕು.
ಕಾರ್ಮಿಕ ವಿರೋಧಿ, ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಯಾವುದೇ ರೂಪದಲ್ಲಿ ಖಾಸಗೀಕರಣ ಮಾಡಬಾರದು. ಎನ್‌ಎಂಪಿಯನ್ನು ರದ್ದು ಮಾಡಬೇಕು. ನರೇಗಾಕ್ಕೆ ಹೆಚ್ಚಿನ ಅನುದಾನ ನೀಡಿ ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಣೆ ಮಾಡಬೇಕು. ಗುತ್ತಿಗೆ ಹೊರಗುತ್ತಿಗೆ ಸೇರಿದಂತೆ ಎಲ್ಲ ಅನೌಪಚಾರಿಕ ವಲಯದ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು.ಬೆಲೆ ಏರಿಕೆಯನ್ನು ನಿಗ್ರಹಿಸಲು ದೃಢವಾದ ಪರಿಹಾರ ಕ್ರಮಗಳನ್ನು ಘೋಷಿಸಬೇಕು. ಎನ್‌ಪಿಎಸ್, ಯುಪಿಎಸ್ ಕೈಬಿಟ್ಟು ಹಳೆಯ ಪದ್ಧತಿಯಾದ ಒಪಿಎಸ್ ಮುಂದುವರಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2023 ಕೈಬಿಡಬೇಕು ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ನಿಲ್ಲಿಸಬೇಕು. ಪ್ರತಿದಿನ ಎಂಟು ಗಂಟೆ ಅವಧಿಗೆ ಮೀರದಂತೆ ಕಾರ್ಮಿಕರ ಕೆಲಸದ ಅವಧಿಯನ್ನು ನಿಗದಿಪಡಿಸಬೇಕು. ಮಹಿಳೆಯರಿಗೆ ರಾತ್ರಿ ಪಾಳಿ ಹಾಕುವುದನ್ನು ಬಿಡಬೇಕು. ಎಲ್ಲ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ವೇತನ ನೀಡಿ
ಬ್ಯಾಡಗಿ: ರಾಜ್ಯ ಸರ್ಕಾರ 2023ರ ಚುನಾವಣೆ ವೇಳೆ ಘೋಷಣೆ ಮಾಡಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ವೇತನ ನೀಡಬೇಕು. ನಿವೃತ್ತಿಯ ಬಳಿಕ ಇಡುಗಂಟು ನೀಡುವ ಜತೆ ಜೀವಿತಾವಧಿಯವರೆಗೂ ₹10 ಸಾವಿರ ಪಿಂಚಣಿ ನೀಡಬೇಕೆಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಗೌರಮ್ಮ ನಾಯ್ಕರ ಸರ್ಕಾರಕ್ಕೆ ಆಗ್ರಹಿಸಿದರು.ಇಲ್ಲಿನ ತಹಸೀಲ್ದಾರ್ ಕಾರ್ಯಾಲಯ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.ಬಳಿಕ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸದಿದ್ದಲ್ಲಿ ಸರ್ಕಾರದ ಧೋರಣೆ ಖಂಡಿಸಿ ಬೆಳಗಾವಿಯ ಅಧಿವೇಶನ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ತಹಸೀಲ್ದಾರ್ ಫೀರೋಜ್ ಷಾ ಸೋಮನಕಟ್ಟೆ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಹೇಮಾವತಿ ಎಲಿ, ಶಶಿಕಲಾ ಪುರಾಣಿಕಮಠ, ಛಾಯಾ ತಂಬಾಕದ, ಪೂಜಾ ನಾಯಕ, ಹೇಮಾ ಆಸಾದಿ, ಸುಧಾ ಅಂಗಡಿ, ರೂಪಾ ದಾಸೋಹಮಠ, ಪ್ರೇಮಿಲಾ ಬಾಳಿಕಾಯಿ, ಅನಿತಾ ಮೋಟೆಬೆನ್ನೂರ, ಮಂಜುಳಾ ಪಾಟೀಲ, ವನಜಾಕ್ಷಿ ಆಡಿನವರ, ಸುಮಿತ್ರಾ ಓಲೇಕಾರ, ಪರಮೇಶ್ವರಿ ಮದ್ಯಾಹ್ನದ, ಲಕ್ಷ್ಮಿ ಪಾಟೀಲ, ಶಕುಂತಲಾ ದಾನಣ್ಣನವರ, ಕವಿತಾ ನಾಡಿಗೇರ, ಸಾವಿತ್ರಾ ಸಾತೇನಹಳ್ಳಿ, ಚನ್ನಬಸಪ್ಪ ಶಿಡೇನೂರು, ಮಲ್ಲಮ್ಮ ಚಲವಾದಿ, ರೇಣುಕಾ ಬ್ಯಾಡಗಿ ಇದ್ದರು.