ಸಾರಾಂಶ
ಪಟ್ಟಣದ ಜೋಗ ರಸ್ತೆಯ ಘನತ್ಯಾಜ್ಯ ಘಟಕದ ಎದುರು ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿದ್ದಾರೆ.
ಸಿದ್ದಾಪುರ: ೨೦೨೫-೨೬ನೇ ಸಾಲಿನ ಆಸ್ತಿ ತೆರಿಗೆ ₹1.12 ಕೋಟಿ ಆಗುತ್ತಿದ್ದು, ಅದರಲ್ಲಿ ಈಗಾಗಲೇ ₹೬೭ ಲಕ್ಷ ವಸೂಲಿ ಆಗಿದೆ ಎಂದು ಪಪಂ ಮುಖ್ಯಾಧಿಕಾರಿ ಜೆ.ಆರ್. ನಾಯ್ಕ ತಿಳಿಸಿದರು.
ಪಪಂ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಕುರಿತು ವಿವರ ನೀಡಿದರು.ಪಟ್ಟಣದ ಜೋಗ ರಸ್ತೆಯ ಘನತ್ಯಾಜ್ಯ ಘಟಕದ ಎದುರು ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿದ್ದಾರೆ. ಈ ಕುರಿತು ಏನು ಕ್ರಮ ಕೈಗೊಂಡಿದ್ದಿರಿ? ಎಂದು ಪಪಂ ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಹಾಗೂ ಮಾರುತಿ ಟಿ.ನಾಯ್ಕ ಹೊಸುರು ಪ್ರಶ್ನಿಸಿ ಬಾಲಿಕೊಪ್ಪ ಬೆಟ್ಟದಲ್ಲಿ ಹಾಗೂ ಕೊಂಡ್ಲಿಯಲ್ಲಿ ಗುಜರಿ ಸಾಮಾನುಗಳನ್ನು ತಂದು ಹಾಕುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರು ಈ ಕೆಲಸ ಮಾಡುತ್ತಾರೋ ಅವರಿಗೆ ದಂಡ ವಿಧಿಸುವಂತೆ ತಿಳಿಸಿದರು.
ಸ್ಥಳೀಯ ಗಾಡಿಬಿಡ್ಕಿಯಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ನಡೆಯುತ್ತಿದೆ. ಈವರೆಗೂ ಪೂರ್ಣಗೊಂಡಿಲ್ಲ. ಇದನ್ನು ಪಪಂನಿಂದಲೇ ಮಾಡಬೇಕಾಗಿದೆ. ಹಣ ಎಲ್ಲಿಂದ ತರುತ್ತೀರಿ? ಕಸ ವಿಲೇವಾರಿ ಮಾಡುವುದಕ್ಕೆ ಹಣ ಇಲ್ಲ ಎಂದು ಹೇಳುತ್ತಿದ್ದಿರಿ, ಹೀಗಾದರೆ ಹೇಗೆ? ಎಂದು ಕೆ.ಜಿ.ನಾಯ್ಕ ಪ್ರಶ್ನಿಸಿದರು. ಮಳೆಗಾಲದಲ್ಲೂ ರವೀಂದ್ರ ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿದ್ದು ಈಗಾಗಲೇ ಹಲವು ಬಾರಿ ತಿಳಿಸಿದರೂ ಸರಿ ಆಗಿಲ್ಲ. ಕೂಡಲೇ ವ್ಯವಸ್ಥೆ ಸರಿಪಡಿಸುವಂತೆ ನಂದನ ಬೋರ್ಕರ್ ಹಾಗೂ ಗುರುರಾಜ್ ಶಾನಭಾಗ ತಿಳಿಸಿದರು.ಪಪಂ ವ್ಯಾಪ್ತಿಯ ೧೮ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ₹೧೦ ಲಕ್ಷದಲ್ಲಿ ಟೆಂಡರ್ ಕರೆಯಲು, ಪಪಂ ವ್ಯಾಪ್ತಿಯಲ್ಲಿ ಅತಿ ಅವಶ್ಯ ಇರುವ ಕಡೆ ತೆರೆದ ಬಾವಿ ದುರಸ್ತಿ ಮಾಡಲು ಸಭೆ ಒಪ್ಪಿಗೆ ನೀಡಿತು.
ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ಸದಸ್ಯರು, ಅಧಿಕಾರಿಗಳಿದ್ದರು.