ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಸಿಗಬೇಕಾದ ಮೂಲಸೌಕರ್ಯ ಮತ್ತು ವಿವಿಧ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

ತಹಸೀಲ್ದಾರ್ ಮೂಲಕ ಕಾರ್ಮಿಕರ ಕಲ್ಯಾಣ ಮಂಡಳಿ, ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಹೊನ್ನಾವರ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಸಿಗಬೇಕಾದ ಮೂಲಸೌಕರ್ಯ ಮತ್ತು ವಿವಿಧ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕಾ ಬಿಎಂಎಸ್ (ಸಂಯೋಜಿತ) ಕಟ್ಟಡ ಮತ್ತು ಇತರೇ ನಿರ್ಮಾಣ ಕಾಮಗಾರಿ ಮತ್ತು ಸಂಘಟನೆಯಿಂದ ತಹಸೀಲ್ದಾರ್ ಮೂಲಕ ಮಂಡಳಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಹರಿಶ್ಚಂದ್ರ ಜಿ. ನಾಯ್ಕ್ ಮಾತನಾಡಿ, 60 ವರ್ಷ ಪೂರ್ಣಗೊಂಡ ಕಾರ್ಮಿಕರ ಮಕ್ಕಳಿಗೆ ವಿದ್ಯಾಸಿರಿ ಅಥವಾ ವಿದ್ಯಾರ್ಥಿವೇತನ ನೀಡಬೇಕು. ಜೊತೆಗೆ ಕಾರ್ಮಿಕರು ಜೀವಂತವಾಗಿರುವವರೆಗೆ ವೈದ್ಯಕೀಯ ಧನಸಹಾಯ ಸೌಲಭ್ಯ ಮುಂದುವರಿಸಬೇಕು. ಕೆಲಸದ ವೇಳೆಯಲ್ಲಿ ಸಂಭವಿಸುವ ಅಪಘಾತ ಅಥವಾ ಖಾಯಿಲೆಗಳಿಂದ ಅಸಮರ್ಥರಾಗುವ ಕಾರ್ಮಿಕರಿಗೆ ಮಂಡಳಿಯಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ತಡೆಹಿಡಿಯದೇ ಮುಂದುವರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕಿನಲ್ಲಿ 18ಸಾವಿರಕ್ಕೂ ಅಧಿಕ ಮಂದಿ ಕಟ್ಟಡ ಕಾರ್ಮಿಕರಿದ್ದು ಅವರಿಗಾಗಿ ಬಂದಂತಹ 800ಕ್ಕೂ ಅಧಿಕ ಕಾರ್ಮಿಕ ಕಿಟ್ ಹಂಚಿಕೆಯಾಗದೆ ಹಾಗೆ ಉಳಿದಿದೆ. ಈ ಹಿಂದಿನ ಸಚಿವರನ್ನು ಹಾಗೂ ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿಯಾಗಿ ಕಿಟ್ ಹಂಚಿಕೆ ಬಗ್ಗೆ ಮಾತನಾಡಿದ್ದೆವು ಆದರೆ ಯಾರು ಕೂಡ ಇದುವರೆಗೂ ಸರಿಯಾಗಿ ಸ್ಪಂದಿಸಿಲ್ಲ ಎಂದರು.

2020ಕ್ಕಿಂತ ಮೊದಲು ಕಲ್ಯಾಣ ಮಂಡಳಿಯು ಕಾರ್ಮಿಕರ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿತ್ತು ಹಾಗೂ ಸಂಘ-ಸಂಸ್ಥೆಗಳ ಹೋರಾಟಗಳಿಗೆ ಸ್ಪಂದಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅನಗತ್ಯ ಯೋಜನೆಗಳಿಗೆ ಹಣ ವೆಚ್ಚ ಮಾಡಲಾಗುತ್ತಿದ್ದು, ನೈಜ ಕಾರ್ಮಿಕರಿಗೆ ಮೂಲಸೌಕರ್ಯಗಳು ಸಕಾಲದಲ್ಲಿ ಸಿಗುತ್ತಿಲ್ಲ. ಅಧಿಕಾರಿಗಳು ಮತ್ತು ಸರ್ಕಾರ ತಕ್ಷಣ ಈ ಹಿಂದಿನ ನೀತಿಗಳನ್ನು ಅಳವಡಿಸಿಕೊಂಡು ಕಾರ್ಮಿಕರ ಹಿತ ಕಾಯದಿದ್ದಲ್ಲಿ ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.

ಈ ಸಂದರ್ಭ ಸಂಘಟನೆಯ ತಾಲೂಕು ಅಧ್ಯಕ್ಷ ಗಣಪತಿ ಎನ್. ನಾಯ್ಕ್, ಗೌರವಾಧ್ಯಕ್ಷ ಮಂಜುನಾಥ ಎನ್. ನಾಯ್ಕ್, ಕಾರ್ಯದರ್ಶಿ ಶ್ರೀಕಾಂತ ಜಿ. ಗುನಗಾ, ಉಪಾಧ್ಯಕ್ಷ ಪರಮೇಶ್ವರ ಎನ್. ನಾಯ್ಕ್ ಇಡುಗುಂಜಿ, ಖಜಾಂಚಿ ಸೀತಾರಾಮ ಎಂ. ನಾಯ್ಕ್, ತಾಲೂಕು ಮಾಜಿ ಅಧ್ಯಕ್ಷ ಗೋಪಾಲ ಎಂ. ನಾಯ್ಕ್, ತಾಲೂಕು ಪ್ರಮುಖರಾದ ಶೇಖರ ಬರಮಪ್ಪ ಒಗ್ಗರ್, ಸದಸ್ಯರಾದ ನಾಗವೇಣಿ ಮುಕ್ರಿ, ಪರಮೇಶ್ವರಿ ಮುಕ್ರಿ, ಶ್ರೀಧರ ಎಂ. ನಾಯ್ಕ್, ಲಕ್ಷ್ಮಣ ಎಂ. ನಾಯ್ಕ್ ಚಿಕನಕೋಡ್, ಮಂಜುಳಾ ಮುಕುಂದ ನಾಯ್ಕ ಉಪಸ್ಥಿತರಿದ್ದರು.