ಸಾರಾಂಶ
ಬಳ್ಳಾರಿ: ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಎಐಯುಟಿಯುಸಿ ಕಾರ್ಮಿಕ ಸಂಘಟನೆ ನಗರದಲ್ಲಿ ಗುರುವಾರ ಮೆರವಣಿಗೆ ನಡೆಸಿ ದುಡಿವ ಜನರ ಐಕ್ಯತೆಗೆ ಕರೆ ನೀಡಿತು.ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿತು.
ಮೆರವಣಿಗೆ ಶುರು ಮುನ್ನ ನಾರಾಯಣರಾವ್ ಪಾರ್ಕ್‌ನಲ್ಲಿ ಸಮಾವೇಶಗೊಂಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ ಗೌಡ, ಕಾರ್ಮಿಕ ದಿನಾಚರಣೆ ಹಿನ್ನೆಲೆ, ಮಹತ್ವ ಹಾಗೂ ಕಾರ್ಮಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಸಂಘಟನೆಗಳ ಪಾತ್ರ, ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ದುಡಿವ ಜನರ ಮೇಲಾಗುತ್ತಿರುವ ಪರಿಣಾಮಗಳು ಕುರಿತು ವಿವರಿಸಿದರು.ಅಪಾರವಾದ ತ್ಯಾಗ, ಬಲಿದಾನಗಳಿಂದ ಪಡೆದುಕೊಂಡು ಕಾರ್ಮಿಕ ಹಕ್ಕುಗಳು, ದಿನಂಪ್ರತಿ ಇಂದು ದಮನಕ್ಕೆ ಒಳಗಾಗುತ್ತಿವೆ. 8 ತಾಸು ದುಡಿಮೆ ಎನ್ನುವುದು ಕೇವಲ ಪುಸ್ತಕಕ್ಕೆ ಸೀಮಿತವಾಗಿದೆ. ಕನಿಷ್ಟ 10-14 ತಾಸುಗಳ ಕೆಲಸ ಇಂದು ಅಲಿಖಿತ ನಿಯಮವಾಗಿ ಬಿಟ್ಟಿದೆ. ಪ್ರಬಲವಾದ ಕಾರ್ಮಿಕ ಹೋರಾಟದ ಅನುಪಸ್ಥಿತಿಯಲ್ಲಿ ದೊಡ್ಡ ಕಾರ್ಪೋರೇಟ್ ಮಾಲೀಕರು ಎಲ್ಲ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ.ವಾರದಲ್ಲಿ 48 ಗಂಟೆಯ ದುಡಿಮೆಯ ಬದಲಿಗೆ ಒಬ್ಬರು 72 ಗಂಟೆ ಕೆಲಸ ಮಾಡಿ ಅಂದರೆ, ಮತ್ತೊಬ್ಬರು 90 ಗಂಟೆ ಕೆಲಸ ಮಾಡಿ ಎಂದು ಕಾರ್ಮಿಕರಿಗೆ ಉಪದೇಶ ಮಾಡುತ್ತಿದ್ದಾರೆ. ಈ ಮಾಲೀಕರಿಗೆ ಕಾರ್ಮಿಕರ ಆರೋಗ್ಯ, ಕೌಟುಂಬಿಕ ಜೀವನದ ಬಗ್ಗೆ ಎಳ್ಳಷ್ಟಾದರೂ ಕಾಳಜಿ ಇದೆಯೇ? ಗರಿಷ್ಠ ಲಾಭ ಗಳಿಸುವುದು ಬಿಟ್ಟರೆ ಈ ಮಾಲೀಕರಿಗೆ ಬೇರೆ ಏನಾದರೂ ಗೊತ್ತು-ಗುರಿಯಿದೆಯೇ? ಆಳುವ ಎಲ್ಲ ಸರ್ಕಾರಗಳು ಈ ಕಾರ್ಪೋರೆಟ್ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತವೆ.ಅವರ ಲಾಭ ನೂರಾರುಪಟ್ಟು ಹೆಚ್ಚಿಸಲು ಕಾರ್ಮಿಕ ಕಾನೂನುಗಳನ್ನೇ ಬದಲಾವಣೆ ಮಾಡುತ್ತಿವೆ ಎಂದು ಟೀಕಿಸಿದರಲ್ಲದೆ, ಕಾರ್ಮಿಕ ಚಳವಳಿ ತೀವ್ರಗೊಳಿಸಬೇಕು. ಜಾತಿ-ಧರ್ಮದ ಹೆಸರಲ್ಲಿ ಕಾರ್ಮಿಕರ ಒಗ್ಗಟ್ಟು ಮುರಿಯುವ ಕುತಂತ್ರ ಸೋಲಿಸಬೇಕು ಎಂದು ಕರೆ ನೀಡಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಶಾಂತಾ ಮಾತನಾಡಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಜಿ.ಸುರೇಶ್, ಮುರಳಿ, ಚೇತನ್, ರೇಷ್ಮಾ, ಚಿಟ್ಟೆಮ್ಮ, ಹುಲುಗಪ್ಪ, ಪಾರ್ವತಮ್ಮ, ನಿಂಗಪ್ಪ, ವೀರಭದ್ರಯ್ಯ ಸ್ವಾಮಿ, ಮಹೇಶ ಸೇರಿದಂತೆ ಎಐಯುಟಿಯುಸಿ ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.ಕಳೆಗುಂದಿದ ಕೆಂಬಾವುಟ: ಮೇ ದಿನಾಚರಣೆ ದಿನದಂದು ನಗರದಲ್ಲಿ ಸಾವಿರಾರು ಜನ ಕಾರ್ಮಿಕರ ಮೆರವಣಿಗೆ, ಕೆಂಬಾವುಟಗಳ ಹಾರಾಟ ವಿಜೃಂಭಿಸುತ್ತಿತ್ತು. ಆದರೆ, ಈ ಬಾರಿ ಕಾರ್ಮಿಕ ದಿನಾಚರಣೆ ಕಳೆಗುಂದಿತ್ತು. ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷ ಬೆಂಬಲಿತ ಎಐಯುಟಿಸಿ ಕಾರ್ಮಿಕ ಸಂಘಟನೆ ಹೊರತುಪಡಿಸಿದರೆ ನಗರದಲ್ಲಿ ಯಾವುದೇ ಕಾರ್ಮಿಕ ಸಂಘಟನೆಗಳ ಗಮನಾರ್ಹ ಮೆರವಣಿಗೆ, ಕೆಂಬಾವುಟಗಳು ಕಂಡು ಬರಲಿಲ್ಲ.
ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಎಐಟಿಯುಸಿ ಕಾರ್ಮಿಕ ಸಂಘಟನೆ ಕಚೇರಿ ಮುಂದೆ ಧ್ವಜಾರೋಹಣ ನೆರವೇರಿಸಿದ್ದು ಬಿಟ್ಟರೆ ಈ ಬಾರಿ ಮೆರವಣಿಗೆಯಿಂದ ದೂರ ಉಳಿದಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಎಐಟಿಯುಸಿ ಸಂಘಟನೆಯ ಕಾರ್ಮಿಕ ಮುಖಂಡ ಎ.ಆದಿಮೂರ್ತಿ, ನಾನಾ ಕಾರಣಗಳಿಂದ ಮೆರವಣಿಗೆ ಮಾಡಲಾಗಲಿಲ್ಲ. ಶೀಘ್ರದಲ್ಲಿಯೇ ಕಾರ್ಯಕ್ರಮ ರೂಪಿಸುತ್ತೇವೆ ಎಂದು ತಿಳಿಸಿದರು.ಹೋರಾಟದ ಮುಂಚೂಣಿಯಲ್ಲಿದ್ದ ಸಿಐಟಿಯು ಸಂಘಟನೆ ಬೆರಳೆಣಿಕೆಯಷ್ಟು ಜನರ ಮೆರವಣಿಗೆ ನಡಸಿ ಕೈ ತೊಳೆದುಕೊಂಡಿತು.
ಕಳೆದ ಒಂದು ದಶಕದ ಅವಧಿಯಲ್ಲಾದ ಕಾರ್ಮಿಕ ಸಂಘಟನೆಗಳ ಪಲ್ಲಟ ನೋಡಿದಾಗ ಈ ಹಿಂದೆ ಮೇ ದಿನಾಚರಣೆ ಇಡೀ ನಗರವೇ ಕೆಂಬಾವುಟಗಳಿಂದ ಕಂಗೊಳಿಸುತ್ತಿತ್ತು. ವಿದ್ಯಾರ್ಥಿ,ಯುವಜನರು, ಮಹಿಳಾ, ಕಾರ್ಮಿಕ ಸಂಘಟನೆಗಳು ಮೇ ದಿನಾಚರಣೆಯಲ್ಲಿ ಭಾಗವಹಿಸಿ, ಕಾರ್ಮಿಕ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಧ್ವನಿ ಗೂಡಿಸುತ್ತಿದ್ದರು. ಹೀಗಾಗಿ ಇಡೀ ನಗರವೇ ಹೋರಾಟಗಾರರಿಂದ ತುಂಬಿಕೊಂಡಿರುತ್ತಿತ್ತು. ಮೇ 1ರಂದು ನಗರದಲ್ಲಿ ಎಲ್ಲಿ ನೋಡಿದರೂ ಅಂಗನವಾಡಿ, ಆಶಾ, ಬಿಸಿಯೂಟ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಕಂಡು ಬರುತ್ತಿದ್ದರು. ಬರೀ ದಶಕದಲ್ಲಾದ ಬದಲಾವಣೆ ಗಮನಿಸಿದರೆ, ಕೆಂಬಾವುಟ ದಿನದಿನಕ್ಕೆ ಮಂಕಾಗುತ್ತಿರುವುದು ನಿಚ್ಚಳವಾಗುತ್ತಿದೆ. ಬರುತ್ತಿದ್ದರು. ಬರೀ ದಶಕದಲ್ಲಾದ ಬದಲಾವಣೆ ಗಮನಿಸಿದರೆ ಕೆಂಬಾವುಟ ದಿನದಿನಕ್ಕೆ ಮಂಕಾಗುತ್ತಿರುವುದು ನಿಚ್ಚಳವಾಗುತ್ತಿದೆ.