ಜೀತಮುಕ್ತರಿಗೆ ಪ್ರತ್ಯೇಕವಾಗಿ 500 ಕೋಟಿ ಅನುದಾನ ಮೀಸಲಿಡಿ

| Published : Feb 20 2025, 12:47 AM IST

ಜೀತಮುಕ್ತರಿಗೆ ಪ್ರತ್ಯೇಕವಾಗಿ 500 ಕೋಟಿ ಅನುದಾನ ಮೀಸಲಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟ ಮತ್ತು ಜೀವಿಕ ಸಂಘಟನೆಯಿಂದ ಪ್ರತಿಭಟನಾ ಮೆರವವಣಿಗೆ ನಡೆಸಿ ಒತ್ತಾಯ

ಕನ್ನಡಪ್ರಭ ವಾರ್ತೆ ಎಚ್. ಡಿ. ಕೋಟೆ

ಈ ಬಾರಿಯ ಬಜೆಟ್‌ ನಲ್ಲಿ ಜೀತಮುಕ್ತರಿಗೆ ಪ್ರತ್ಯೇಕವಾಗಿ 500 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟ ಮತ್ತು ಜೀವಿಕ ಸಂಘಟನೆ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಶಾಸಕ ಅನಿಲ್ ಚಿಕ್ಕಮಾದು ಮತ್ತು ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.

ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್ ಬಿ. ನೂರಲಕುಪ್ಪೆ ಮಾತನಾಡಿ, ರಾಜ್ಯದಲ್ಲಿ ಎರಡು ಸಾವಿರ ಇಸವಿಯಿಂದ 2024 ತನಕ 7 ಸಾವಿರ ಮಂದಿ ಜೀತಮುಕ್ತಿ ಪಡೆದಿದ್ದು, ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಸುಮಾರು 1,155 ಕ್ಕೂ ಹೆಚ್ಚು ಜನರು ಜೀತಮುಕ್ತರಾಗಿದ್ದು, ಇವರಿಗೆ 1976 ಜೀತ ಪದ್ಧತಿ ರದ್ಧತಿ ಕಾಯ್ದೆ ಪ್ರಕಾರ ಹಾಗೂ 2006ರ ಜೀತಮುಕ್ತರ ಕ್ರಿಯಾ ಯೋಜನೆ ಪ್ರಕಾರ ಸಿಗಬೇಕಾದ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳು ಸರಿಯಾಗಿ ಮತ್ತು ಸಕಾಲದಲ್ಲಿ ಸಿಗದೆ ಜೀತಮುಕ್ತರ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ ಎಂದು ತಿಳಿಸಿದರು.

ಅಲ್ಲದೆ ಅಲ್ಲಲ್ಲಿ ಮತ್ತೆ ಜೀತಕ್ಕೆ ಹೋಗುವ ಪ್ರಸಂಗಗಳು ಕಂಡುಬಂದಿವೆ. ಈ ಹಿನ್ನೆಲೆ ಜೀತಮುಕ್ತರಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಸಾಲಿನ ಸರ್ಕಾರದ ಬಜೆಟ್ (ಆಯವ್ಯಯ) ನಲ್ಲಿ ಜೀತಮುಕ್ತರಿಗೆ ಪ್ರತ್ಯೇಕವಾಗಿ 500 ಕೋಟಿ ರು. ಅನುದಾನವನ್ನು ಮೀಸಲಿಡಬೇಕು ಮತ್ತು ಜೀತಕಾನೂನಿಗೆ ಹಾಗು ಜೀತ ಮುಕ್ತರಿಗೆ ಮಾರಕವಾಗಿರುವ ಕೇಂದ್ರ ಸರ್ಕಾರದ ಎಸ್.ಒಪಿ ಅನ್ನು ಈ ಕೂಡಲೇ ರದ್ದುಗೊಳಿಸಬೇಕು ಮತ್ತು 1976ರ ಜೀತ ಪದ್ಧತಿ ರದ್ಧತಿ ಕಾನೂನನ್ನೆ ಪರಿಣಾಮಕಾರಿಯಾಗಿ ಮತ್ತು ಸಮಗ್ರವಾಗಿ ಅನುಷ್ಠಾನ ಮಾಡಬೇಕೆಂದು ಅವರು ಒತ್ತಾಯಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಮಹದೇವ್, ಮಾಜಿ ಅಧ್ಯಕ್ಷ ಶಿವಣ್ಣ, ಜಿಲ್ಲಾ ಸಂಚಾಲಕ ಬಸವರಾಜ್, ತಾಲೂಕು ಸಂಚಾಲಕ ಚಂದ್ರಶೇಖರ ಮೂರ್ತಿ, ದಲಿತ ಮುಖಂಡರಾದ ಮುದ್ದುಮಲ್ಲಯ್ಯ, ಶಿವರಾಜ್, ಪ್ರಸನ್ನ ಕಾಡುಮನೆ ಮಾತನಾಡಿದರು.

ಸ್ಥಳಕ್ಕೆ ಶಾಸಕ ಅನಿಲ್ ಚಿಕ್ಕಮಾದು ಆಗಮಿಸಿ ಮನವಿ ಸ್ವೀಕರಿಸಿ, ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಮತ್ತು ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಟರಾಜ್, ಶ್ರೀನಿವಾಸ್, ವೆಂಕಟೇಶ, ನಾಗರಾಜ್, ನಾಗಮ್ಮ, ವಸಂತ, ಮಹದೇವ, ಶಿವಣ್ಣ, ಮಲ್ಲಿಗಮ್ಮ, ಲಕ್ಷ್ಮಮ್ಮ, ಸೋಮಣ್ಣ, ಗೋಪಾಲ್, ಗಣೇಶ, ಮಹದೇವಪ್ಪ, ಮಂಜುನಾಥ್. ಪುಟ್ಟರಾಚಯ್ಯ ಇದ್ದರು.