ಸಾರಾಂಶ
ಭಟ್ಕಳ ಡಿವೈಎಸ್ಪಿಗೆ ಶ್ರೀರಾಮ ಸೇನೆ ಮನವಿ, ಮರು ತನಿಖೆ ನಡೆಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಕನ್ನಡಪ್ರಭ ವಾರ್ತೆ ಭಟ್ಕಳ
ಮುರುಡೇಶ್ವರದಲ್ಲಿ 2010ರಲ್ಲಿ ಅತ್ಯಾಚಾರ ಮತ್ತು ಕೊಲೆಗೀಡಾದ ಯಮುನಾ ನಾಯ್ಕಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಕೋರ್ಟ್ ಆದೇಶದಂತೆ ಶೀಘ್ರ ಮರುತನಿಖೆ ಮುಗಿಸಿ ನಿಜವಾದ ಆರೋಪಿಯನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿ ಶ್ರೀರಾಮಸೇನೆಯಿಂದ ಡಿವೈಎಸ್ಪಿ ಮಹೇಶಗೆ ಮನವಿ ಸಲ್ಲಿಸಲಾಯಿತು.ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮಸೇನೆ ಉತ್ತರ ಪ್ರಾಂತ್ಯ ಉಪಾಧ್ಯಕ್ಷ ಜಯಂತ ನಾಯ್ಕ, ಯಮುನಾ ನಾಯ್ಕ ಕೊಲೆ ಪ್ರಕರಣ ನಡೆದು 15 ವರ್ಷ ಕಳೆದಿದೆ. ಈ ಪ್ರಕರಣದಲ್ಲಿ ಅಮಾಯಕ ವೆಂಕಟೇಶ ಹರಿಕಾಂತನನ್ನು ಸಿಲುಕಿಸಿ ಸುಮಾರು ಏಳು ವರ್ಷಗಳ ಕಾಲ ಜೈಲುವಾಸ ಅನುಭವಿಸುವಂತೆ ಮಾಡಲಾಯಿತು. ಜಿಲ್ಲಾ ನ್ಯಾಯಾಲಯ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿದ್ದಲ್ಲದೇ ಪ್ರಕರಣದ ಮರು ತನಿಖೆಗೆ ಆದೇಶ ನೀಡಿತ್ತು. ಈ ಹಿಂದೆಯೂ ನಾವು ಡಿವೈಎಸ್ಪಿಗೆ ಮನವಿ ಸಲ್ಲಿಸಿದ್ದರೂ ಇನ್ನೂ ಮರುತನಿಖೆ ಪೂರ್ಣಗೊಂಡಿಲ್ಲ. ಇದೀಗ ಡಿವೈಎಸ್ಪಿ ಮಹೇಶ ಕೆ. ತನಿಖೆ ಒಂದು ಹಂತಕ್ಕೆ ಬಂದಿದ್ದು ಆದಷ್ಟು ಬೇಗ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.
ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕು. ನಾವು ಕಾಯುವ ಸಮಯ ಮುಗಿದಿದೆ. ಇನ್ನು ನಮಗೆ ಕಾಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ವೇದಿಕೆ ಸಜ್ಜು ಮಾಡುತ್ತೇವೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯದ ಆದೇಶದಂತೆ ಪ್ರಕರಣದ ಮರುತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಈ ಕುರಿತು ವಿಶೇಷ ಆಸಕ್ತಿ ವಹಿಸಿ ಮರುತನಿಖೆಗೆ ಚುರುಕು ಮುಟ್ಟಿಸಬೇಕಾಗಿದೆ. ಯಮುನಾ ನಾಯ್ಕ ಕುಟುಂಬದವರು ಬಡತನದಲ್ಲಿದ್ದು ಕೆಲವರು ಅವರ ಹಾದಿ ತಪ್ಪಿಸುತ್ತಿದ್ದಾರೆ. ವೆಂಕಟೇಶ ಹರಿಕಾಂತ ನ್ಯಾಯಾಲಯದ ಆದೇಶದಂತೆ ಬಿಡುಗಡೆ ಆಗಿದ್ದರೂ ಸಹ ಕೆಲವರು ಇನ್ನೂ ಆರೋಪ ಹಾಕುತ್ತಿದ್ದಾರೆ. ಈ ಹಿಂದೆ ಸಮಾಜದ ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ ಜತೆಗೂ ಪ್ರಕರಣದ ಕುರಿತಾಗಿ ಮಾತನಾಡಿದ್ದು ಆ ಸಂದರ್ಭ ಗುರುಗಳು ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಪೊಲೀಸರೊಂದಿಗೆ ಮಾತನಾಡಿ ಎಂಬ ಸಲಹೆ ನೀಡಿದ್ದು, ಸಮಾಜದ ಮುಖಂಡರು ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಇನ್ನಾದರೂ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭ ಶ್ರಿರಾಮ ಸೇನೆ ಪ್ರಮುಖರಾದ ರಾಘು ನಾಯ್ಕ, ಮಂಜುನಾಥ ನಾಯ್ಕ, ರಾಮ ನಾಯ್ಕ, ನಾಗರಾಜ ನಾಯ್ಕ, ಸಂತೋಷ ನಾಯ್ಕ ಮುಂತಾದವರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))