ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ ದಂಧೆಗೆ ಕಡಿವಾಣ ಹಾಕಿ, ಉಚಿತ ಮತ್ತು ಕಡ್ಡಾಯ ಹಾಗೂ ವೈಜ್ಞಾನಿಕ ಶಿಕ್ಷಣದ ಸಮರ್ಪಕ ಜಾರಿಗೊಳಿಸಬೇಕು ಎಂದು ಸಿಪಿಐಎಂಎಲ್ ರೆಡ್‌ಸ್ಟಾರ್ ಜಿಲ್ಲಾ ಸಂಘಟನೆ ಆಗ್ರಹಿಸಿದೆ.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂಘಟನೆ ಮುಖಂಡರು, ಪದಾಧಿಕಾರಿಗಳು ಜಿಲ್ಲಾಡಳಿತದ ಮುಖಾಂತರ ಸಿಎಂಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು. ರಾಜ್ಯದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ಪ್ರತಿವರ್ಷ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡ ಮತ್ತು ಮಧ್ಯಮ ವರ್ಗದ ಪಾಲಕರ ಮಕ್ಕಳಿಗೆ ಸಹಕಾರಿಯಾಗದೇ ವಿಷಕಾರಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ವ್ಯಾಪಾರದ ಕೇಂದ್ರವನ್ನಾಗಿ ಅಕ್ಷರಗಳನ್ನು ಆಯಾ ಸಂಸ್ಥೆಯವರು ತಕ್ಕಡಿಯಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಸರ್ಕಾರದ ಸಂವಿಧಾನಾತ್ಮಕ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸಮರ್ಪಕವಾಗಿ ಜಾರಿಯಾಗದೇ ನೂರಾರು ಸರಕಾರಿ ಶಾಲಾ ಕಾಲೇಜುಗಳು ಮುಚ್ಚಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕ್ಯಾಪಿಟೇಷನ್, ಡೊನೇಷನ್, ದುಬಾರಿ ಶುಲ್ಕ, ಕಿರುಕುಳ, ಕಡಿಮೆ ಅಂಕ, ಮಾನಸಿಕ ಹಿಂಸೆ ನೀಡಿ, ಸಾಮಾಜಿಕ ಮೌಲ್ಯಾಧಾರಿತ ಸಮಸಮಾಜ, ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡದೆ, ವ್ಯಾಪಾರದ ಕೇಂದ್ರವಾಗಿ ಬದಲಾಗುತ್ತಿವೆ ಎಂದು ಆರೋಪಿಸಿದರು.
ಪ್ರತಿವರ್ಷ ಶೇ.15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂಬುವುದನ್ನು ಹೈಕೋರ್ಟ್ ಸ್ಪಷ್ಟವಾಗಿ ಆದೇಶ ಹೊರಡಿಸಿದೆ ಎಂದು ವಿವರಿಸಿದರು.ರಾಜ್ಯ ಸರಕಾರ ಹೈಕೋರ್ಟ್ ಮುಂದೆ ಸಮರ್ಪಕ ವಾದ ಮಂಡಿಸದಿರುವುದೇ ಇದಕ್ಕೆ ಕಾರಣವಾಗಿದೆ. ರಾಜ್ಯ ಸರಕಾರವು ಖಾಸಗಿ ಶಾಲೆಗಳೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದರು. ಖಾಸಗಿ ಶಾಲೆಗಳ ದುಬಾರಿ ಶುಲ್ಕ ದಂಧೆಯಿಂದ ಪೋಷಕರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಖಾಸಗಿ ಶಾಲೆಗಳ ವಸೂಲಿಗೆ ಶುಲ್ಕ ನಿಯಂತ್ರಣ ಪ್ರಾಧಿಕಾರವು ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಂಘಟನೆ ರಾಜ್ಯ ಸಮಿತಿಯ ಸದಸ್ಯ ಎಂ.ಗಂಗಾಧರ, ಜಿಲ್ಲಾ ಸಮಿತಿ ಸದಸ್ಯ ಅಜೀಜ್ ಜಾಗೀರದಾರ, ಪದಾಧಿಕಾರಿಗಳಾದ ಆರ್.ಹುಚ್ಚರೆಡ್ಡಿ, ಮುಖಂಡರಾದ ಸೈಯದ್ ಅಬ್ಬಾಸ್ ಅಲಿ,ನಬೀಸಾಬ್, ನಿರಂಜನ ಕುಮಾರ್, ಈರಣ್ಣ ನಾಯಕ್, ಬಸವರಾಜ್ ಕವಿತಾಳ ಇದ್ದರು.