ಬೆಳೆ ಸಮೀಕ್ಷೆಗಾರರನ್ನು ಕಾಯಂಗೊಳಿಸಲು ಆಗ್ರಹ

| Published : Oct 03 2024, 01:20 AM IST

ಸಾರಾಂಶ

ಬೆಳೆ ಸಮೀಕ್ಷೆಗಾರರಿಗೆ ವಿವಿಧ ಸೌಲಭ್ಯ ನೀಡಿ, ಕಾಯಂಗೊಳಿಸಬೇಕು ಎಂದು ನರಗುಂದ ತಾಲೂಕಿನ ಮದಗುಣಿಕಿ ಗ್ರಾಮದ ಬೆಳೆ ಸಮೀಕ್ಷೆಗಾರರು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನರಗುಂದ: ಬೆಳೆ ಸಮೀಕ್ಷೆಗಾರರಾದ ನಮಗೆ ಗುರುತಿನ ಚೀಟಿ, ರೇನ್ ಕೋಟ್, ಪವರ್‌ ಬ್ಯಾಂಕ್, ಫಾರೆಸ್ಟ್ ಶೂ ನೀಡಬೇಕು. ವರ್ಷದಲ್ಲಿ 3 ಬಾರಿ ಮಾತ್ರ ಕೆಲಸ ನೀಡುವ ತಾವು ನಮ್ಮನ್ನು ಕಾಯಂಗೊಳಿಸಬೇಕು. ಮಾಸಿಕ ₹8ರಿಂದ ₹15 ಸಾವಿರ ಗೌರವಧನ ನೀಡಬೇಕು. ಸರ್ವೆ ನಂಬರಿನ ಪ್ರತಿಯೊಂದು ಹಿಸ್ಸಾಕ್ಕೆ ₹25 ನೀಡಬೇಕೆಂದು ತಾಲೂಕಿನ ಮದಗುಣಿಕಿ ಗ್ರಾಮದ ಬೆಳೆ ಸಮೀಕ್ಷೆಗಾರರು ಆಗ್ರಹಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಿನ ಬೆಳೆ ಸಮೀಕ್ಷೆಗಾರರು ತಹಸೀಲ್ದಾರ್‌ ಶ್ರೀಶೈಲ ತಳವಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆನಂತರ ಬೆಳೆ ಸಮೀಕ್ಷೆಗಾರ ಮಹಾದೇವಪ್ಪ ಕುಂಬಾರ ಮಾತನಾಡಿ, ತಾಲೂಕಿನ ಬೆಳೆ ಸಮೀಕ್ಷೆಗಾರರಿಗೆ ಭದ್ರತೆ, ಜೀವವಿಮೆ ಒದಗಿಸುವ ಹಾಗೂ ಕಾಯಂಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ತಾಲೂಕಿನಲ್ಲಿ ಏಳೆಂಟು ವರ್ಷಗಳಿಂದ ಬೆಳೆ ಸಮೀಕ್ಷೆಗಾರರಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಹಲವು ಬಾರಿ ಹಾವು, ಚೇಳು ಕಚ್ಚಿರುತ್ತವೆ. ತೋಳಗಳು ಮತ್ತು ಹೆಚ್ಚೇನುಗಳು ದಾಳಿ ಮಾಡಿದೆ. ನಾವು ಜೀವದ ಆಸೆ ಬಿಟ್ಟು ಶ್ರದ್ಧೆಯಿಂದ ರೈತರ ಸೇವೆ ಮಾಡಿತ್ತಿದ್ದೇವೆ. ಸಮೀಕ್ಷೆ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ. ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಜಮೀನುಗಳ ಮಾಲೀಕರು ತಮ್ಮ ಜಮೀನನ ಸುತ್ತಲು ವಿದ್ಯುತ್‌ ತಂತಿ ಅಳವಡಿಸಿರುತ್ತಾರೆ. ಅದರಿಂದ ವಿದ್ಯುತ್ ತಗುಲಿ ಜೀವ ಹೋಗುವ ಸಂದರ್ಭವಿರುತ್ತದೆ. ಹೀಗಾಗಿ ನಮ್ಮ ಕುಟುಂಬದ ಸುರಕ್ಷತೆ ದೃಷ್ಟಿಯಿಂದ ₹10 ಜೀವ ವಿಮೆ ಮಾಡಿಸಬೇಕು ಎಂದು ಕೋರಿದರು.

ವಿನಾಯಕ ಪವಾರ, ಅರ್ಜುನ ಯಾದವ, ಪ್ರಭು ಹಂಪಣ್ಣವರ, ಶಿವಾನಂದ ಸಣ್ಣಕಲ್ಲ, ಮಲ್ಲನಗೌಡ ಪರ್ವಣ್ಣವರ, ದ್ಯಾಮಣ್ಣ ತಿಗಡಿ, ಭೀಮಪ್ಪ ದೊಡಮನಿ, ಬಸಪ್ಪ ಕುರಿಯವರ, ರವಿ ತಳವಾರ, ಚಿದಾನಂದ ತಳವಾರ, ಕಿಡಿಯಪ್ಪ ಬಾರಕೇರ, ಫಕೀರಪ್ಪ ಮೇಗಲಮನಿ, ಈಶ್ವರ ಭೋಸಲೆ, ಮುತ್ತಪ್ಪ ಹಳಕಟ್ಟಿ, ಸಂತೋಷ ಕುಳಗೇರಿ, ಮಹಾಂತೇಶ ಶಿರಸಂಗಿ ಉಪಸ್ಥಿತರಿದ್ದರು.