ಸಾರಾಂಶ
ರಾಜ್ಯ ಸರ್ಕಾರ ಅನುದಾನ ನೀಡದೇ 10 ಲಕ್ಷ ರೈತರಿಗೆ ಮತ್ತು 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಗಳಾಗುತ್ತಿದೆ.
ಕಾರವಾರ: ರಾಜ್ಯ ಸರ್ಕಾರದಿಂದ ರಚನೆ ಆಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸ್ವಾತಂತ್ರ ಅಮೃತ ಮಹೋತ್ಸವ ನೆನಪಿನ ಅಮೃತ ರೈತ ಉತ್ಪಾದಕರ ಸಂಸ್ಥೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದು, 2021- 22ರಿಂದ 2024- 25ರ ವರೆಗೆ 490 ರೈತ ಉತ್ಪಾದಕರ ಸಂಸ್ಥೆಗಳು ರಚನೆಯಾಗಿವೆ. ಅದರಲ್ಲಿ ಅಂದಾಜು ₹150 ಕೋಟಿ ಅನುದಾನವಿದ್ದು, ಶೇ. 12ರಷ್ಟು ಮಾತ್ರ ಬಿಡುಗಡೆಯಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ರೈತ ಉತ್ಪಾದಕರ ಸಂಸ್ಥೆಗಳ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.ಭಾರತದಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ 2015ರಲ್ಲಿ ದೇಶದ ರೈತರಿಗಾಗಿ ಕಲ್ಪನೆಗೊಂಡ ಪ್ರತಿಷ್ಠಿತ ಯೋಜನೆ ರೈತ ಉತ್ಪಾದಕರ ಸಂಸ್ಥೆಗಳನ್ನು(ಎಫ್‌ಪಿಒ) ಉತ್ತೇಜನ ನೀಡಲಾಗಿದೆ. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ರಚನೆಗೊಂಡ ರೈತ ಉತ್ಪಾದಕ ಸಂಸ್ಥೆಗಳಾಗಿವೆ.
ರೈತರನ್ನು ಒಟ್ಟಾಗಿಸಲು ರೈತ ಉತ್ಪಾದಕರ ಸಂಸ್ಥೆಗಳು ಅತ್ಯಂತ ಪರಿಣಾಮಕಾರಿ ಸಾಂಖ್ಯಿಕ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಾದ ಸಂಸ್ಕರಣೆ. ಮೌಲ್ಯವರ್ಧನೆ, ಸಂಗ್ರಹಣೆ, ಮಾರಾಟ, ಹಣಕಾಸಿನ ಸೇವೆ, ಪರಿಕರಗಳ ಪೂರೈಕೆ, ಬಿತ್ತನೆ ಬೀಜ ಉತ್ಪಾದನೆ ಮುಂತಾದ ವಿಭಿನ್ನ ಚಟುವಟಿಕೆಗಳನ್ನು ಒಟ್ಟಾಗಿ ತೆಗೆದುಕೊಳ್ಳಲು ರೈತ ಉತ್ಪಾದಕ ಸಂಸ್ಥೆಗಳು ರೈತರನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ, ಅವರ ಆದಾಯವನ್ನು ದ್ವಿಗುಣ ಗೊಳಿಸಬಹುದಾದ ಉತ್ತಮ ಸಾಂಸ್ಥಿಕ ಮಾದರಿಗಳಾಗಿವೆ ಎಂದರು.ರಾಜ್ಯ ಸರ್ಕಾರ ಅನುದಾನ ನೀಡದೇ 10 ಲಕ್ಷ ರೈತರಿಗೆ ಮತ್ತು 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಗಳಾಗುತ್ತಿದೆ. ಹೀಗಾಗಿ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿಯ ರೈತ ಮೋರ್ಚಾ ಅಧ್ಯಕ್ಷ ರಮೇಶ ಎಂ. ನಾಯ್ಕ, ಕಾರ್ಯಕರ್ತರು ಇದ್ದರು.