ಆಯೋಗದಲ್ಲಿರುವ ಇಬ್ಬರು ಚುನಾವಣಾ ಆಯುಕ್ತರು ಮತದಾರರ ಪಟ್ಟಿಗಳ ಪರಿಶೀಲನೆ ಹಾಗೂ ಎಸ್‌ಆರ್‌ಆರ್ ನಡವಳಿಕೆಗೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಕನಿಷ್ಠ 14 ಸಂದರ್ಭಗಳಲ್ಲಿ ಆಕ್ಷೇಪಣೆ ದಾಖಲಿಸಿದ್ದು, ತಮ್ಮ ಒಪ್ಪಿಗೆಯಿಲ್ಲದೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆತಂಕ

ಹೊಸಪೇಟೆ: ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವುದು ಹಾಗೂ ಮತದಾನದ ಹಕ್ಕುಗಳ ಮರುಸ್ಥಾಪನೆ‌‌ ಮಾಡಬೇಕು ಎಂದು ಆಗ್ರಹಿಸಿ ಸಿಪಿಐಎಂ ಹೊಸಪೇಟೆ ತಾಲೂಕು ಸಮಿತಿಯಿಂದ ನಗರದಲ್ಲಿ ಶನಿವಾರ‌ ಪ್ರತಿಭಟನೆ ನಡೆಸಲಾಯಿತು.

​ನಗರದ ಶ್ರಮಿಕ ಭವನದಿಂದ ಪ್ರತಿಭಟನೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿದರು.

ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮರುಸ್ಥಾಪಿಸಬೇಕು, ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಪ್ಪಾಗಿ ಹೊರಗಿಡಲಾದ ಮತದಾರರ ಮತದಾನದ ಹಕ್ಕು ಮರುಸ್ಥಾಪಿಸಬೇಕು ಎಂದು‌ ಒತ್ತಾಯಿಸಿದರು.

ಈ ವೇಳೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ ಮಾತನಾಡಿ, ​ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್'''''''' ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಧೀನದಲ್ಲಿ ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಆಯೋಗದಲ್ಲಿರುವ ಇಬ್ಬರು ಚುನಾವಣಾ ಆಯುಕ್ತರು ಮತದಾರರ ಪಟ್ಟಿಗಳ ಪರಿಶೀಲನೆ ಹಾಗೂ ಎಸ್‌ಆರ್‌ಆರ್ ನಡವಳಿಕೆಗೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಕನಿಷ್ಠ 14 ಸಂದರ್ಭಗಳಲ್ಲಿ ಆಕ್ಷೇಪಣೆ ದಾಖಲಿಸಿದ್ದು, ತಮ್ಮ ಒಪ್ಪಿಗೆಯಿಲ್ಲದೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

​ಮತದಾರರ ಡೇಟಾಬೇಸ್ ಅನ್ನು ಕೇಂದ್ರೀಕರಣಗೊಳಿಸುವುದು ಹಾಗೂ ರಾಜ್ಯ ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳ ಪ್ರವೇಶದ ಮೇಲಿನ ನಿರ್ಬಂಧ ಪ್ರಜಾಸತ್ತಾತ್ಮಕ ತತ್ವಗಳಿಗೆ ಹಾಗೂ ಪಾರದರ್ಶಕತೆಗೆ ವಿರುದ್ಧವಾಗಿವೆ ಎಂದು ಆರೋಪಿಸಿದರು.

ಬೇಡಿಕೆಗಳು: ​ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಅಧಿಕಾರದಿಂದ ತೆಗೆದುಹಾಕಬೇಕು. ​ಎಸ್‌ಆರ್‌ಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ, ಮತದಾರರ ಪಟ್ಟಿಯಿಂದ ತಪ್ಪಾಗಿ ಹೊರಗಿಡಲಾದ ಎಲ್ಲರ ಮತದಾನದ ಹಕ್ಕು ಮರುಸ್ಥಾಪಿಸಬೇಕು. ​ಭಾರತ ಚುನಾವಣಾ ಆಯೋಗದ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ ಮರುಸ್ಥಾಪಿಸಬೇಕು. ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪ್ರಾಸ್ತಾವಿತ ಆಯ್ಕೆ ಪ್ರಕ್ರಿಯೆಯಾಗಿ ಬದಲಾಯಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಎಂ.ಜಂಬಯ್ಯ ನಾಯಕ, ಎ.ಕರುಣಾನಿಧಿ, ಎಲ್.ಮಂಜುನಾಥ, ಎನ್.ಯಲ್ಲಾಲಿಂಗ, ಎಂ.ಗೋಪಾಲ, ಕೆಂ. ಸಂತೋಷ್, ಬಿಸಾಟಿ ಮಹೇಶ್, ಕಲ್ಯಾಣಯ್ಯ ಇತರರಿದ್ದರು.