ಕೆಸಿ ವ್ಯಾಲಿ ಕಾಲುವೆ ನವೀಕರಣಕ್ಕೆ ಒತ್ತಾಯ

| Published : Nov 10 2025, 12:15 AM IST

ಕೆಸಿ ವ್ಯಾಲಿ ಕಾಲುವೆ ನವೀಕರಣಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಅಗ್ರಹಾರ, ಮುದುವಾಡಿ ಕೆರೆಯಿಂದ ಮಣಿಘಟ್ಟವರೆಗೆ ಕೆ.ಸಿ.ವ್ಯಾಲಿ ನೀರು ಹರಿಯುವ ಕಾಲುವೆಯನ್ನು ನವೀಕರಣ ಮಾಡಬೇಕು. ಕಾಲುವೆಗೆ ೮ ಅಡಿ ಎತ್ತರದ ತಡೆಗೋಡೆ ಹಾಗೂ ನೀರು ಸರಾಗವಾಗಿ ಹರಿಯಲು ೩೦ ಅಡಿ ಅಗಲ ಮಾಡಬೇಕು. ಶ್ರೀನಿವಾಸಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೆ.ಸಿ.ವ್ಯಾಲಿ ಕಾಲುವೆಯಲ್ಲಿ ಹರಿಯುತ್ತಿರುವ ನೀರು ಅವೈಜ್ಞಾನಿಕ ಕಾಮಗಾರಿಯಿಂದ ಉಕ್ಕಿ ಹರಿದು ಬೆಳೆಗಳು ನಾಶವಾಗಿದ್ದು, ಕೂಡಲೇ ಕಾಲುವೆ ನವೀಕರಣಗೊಳಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾ ರೆಡ್ಡಿ ಒತ್ತಾಯಿಸಿದರು.ತಾಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡುವನಹಳ್ಳಿ ಗ್ರಾಮದಲ್ಲಿ ಜಲಾವೃತವಾಗಿರುವ ಜಮೀನುಗಳನ್ನು ಭಾನುವಾರ ವೀಕ್ಷಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾಲುವೆಯನ್ನು ನವೀಕರಿಸಿ

ಎಸ್.ಅಗ್ರಹಾರ, ಮುದುವಾಡಿ ಕೆರೆಯಿಂದ ಮಣಿಘಟ್ಟವರೆಗೆ ಕೆ.ಸಿ.ವ್ಯಾಲಿ ನೀರು ಹರಿಯುವ ಕಾಲುವೆಯನ್ನು ನವೀಕರಣ ಮಾಡಬೇಕು. ಕಾಲುವೆಗೆ ೮ ಅಡಿ ಎತ್ತರದ ತಡೆಗೋಡೆ ಹಾಗೂ ನೀರು ಸರಾಗವಾಗಿ ಹರಿಯಲು ೩೦ ಅಡಿ ಅಗಲ ಮಾಡಬೇಕು. ಶ್ರೀನಿವಾಸಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡಿದೆ. ಕಾಂಗ್ರೆಸ್ ಶಾಸಕರಿಗೆ ೫೦ ಕೋಟಿ ಅನುದಾನ, ಪ್ರತಿಪಕ್ಷಗಳ ಸದಸ್ಯರಿಗೆ ೨೫ರು.ಗಳನ್ನು ಕೊಡುವುದಾಗಿ ಹೇಳಿದ್ದಾರೆ. ಹೀಗಾಗಿಯೇ, ನ್ಯಾಯಾಲಯ ಮೊರೆ ಹೋಗಿದ್ದೇವೆ ಎಂದು ಹೇಳಿದರು.

ಕ್ಷೇತ್ರಕ್ಕೆ ೧೦೦ ಕೋಟಿ ಬರಬೇಕು. ಈವರೆಗೆ ಒಂದೂ ಮನೆಯನ್ನೂ ಕೊಟ್ಟಿಲ್ಲ. ಅನುದಾನ ಬಿಡುಗಡೆ ಆದರೆ ಪ್ರತಿ ಗ್ರಾಮಕ್ಕೆ ಸೌಕರ್ಯ ಕಲ್ಪಿಸಲಾಗುವುದು. ನಾನು ಯಾವತ್ತೂ ನಾಯಕ ಅಲ್ಲ ಸೇವಕ ಎಂದು ಶಾಸಕರು ಹೇಳಿದರು.

2ನೇ ಹಂತದಲ್ಲಿ ಎಡವಟ್ಟು

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೆ.ಸಿ.ವ್ಯಾಲಿ ನೀರಿನಿಂದ ಹಾನಿಗೆ ಒಳಗಾಗಿರುವ ಜಮೀನು ಪರಿಶೀಲನೆ ಮಾಡಿದ್ದೇವೆ. ಕೆ.ಸಿ ವ್ಯಾಲಿ ನೀರು ಹರಿಯಲು ಕಾಲುವೆ ಸರಿಪಡಿಸಬೇಕಿದೆ. ಕಾಲುವೆ ಹದಗೆಟ್ಟಿರುವುದರ ಜೊತೆಗೆ ಮಳೆ ಬಂದು ಉಕ್ಕಿ ಜಮೀನಿಗೆ ಹರಿದಿದೆ. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆ ಕಾಮಗಾರಿಯಲ್ಲಿ ಎಡವಟ್ಟಾಗಿದೆ ಎಂದು ಹೇಳಿದರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೆ.ಸಿ.ವ್ಯಾಲಿಯಿಂದ ರೈತರ ಜಮೀನಿಗೆ ಆಗಿರುವ ಹಾನಿಯನ್ನು ನೇರವಾಗಿ ಪರಿಶೀಲನೆ ನಡೆಸಲಾಗಿದೆ. ನೀರು ಹರಿಸುವ ಮುನ್ನ ಸಾಧಕ ಬಾಧಕ ಬಗ್ಗೆ ಗಮನ ಹರಿಸಬೇಕಿತ್ತು. ಸರಿಯಾದ ಕಾಲುವೆ ಇಲ್ಲದೆ ಹರಿಸಿ ರೈತರಿಗೆ ಸಮಸ್ಯೆ ತಂದೊಡ್ಡಿದ್ದಾರೆ. ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗಿದೆ ಎಂದರು.

3ನೇ ಹಂತದ ಶುದ್ಧೀಕರಣ ಮಾಡಿ

ಕೆ.ಸಿ ವ್ಯಾಲಿಗೆ ವಿರೋಧ ಇಲ್ಲ. ಆದರೆ, ಮೂರನೇ ಹಂತದ ಶುದ್ಧೀಕರಣ ಮಾಡಿ ಹರಿಸಬೇಕಿತ್ತು. ಶುದ್ಧೀಕರಣ ಮಾಡದೆ ಹರಿಸಿ ಸಮಸ್ಯೆ ಉಂಟಾಗಿದೆ. ಕಲುಷಿತ ನೀರು ಸೇವಿಸಿ ಜನ, ಜಾನುವಾರು, ಪಕ್ಷಿ, ಕೀಟಗಳಿಗೆ ಸಮಸ್ಯೆ ಉಂಟಾಗುತ್ತಿದೆ. ರೋಗಗಳು ಬರುತ್ತಿವೆ. ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ, ಮೂರನೇ ಹಂತದ ಶುದ್ಧೀಕರಣ ಮಾಡಬೇಕು. ಕಾಲುವೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.ಮಳೆ ಬಂದಿದ್ದರಿಂದ ಬಹುತೇಕ ಕೆರೆಗಳು ಉಕ್ಕಿ ಹರಿಯುತ್ತಿವೆ. ಯರಗೋಳ್ ಜಲಾಶಯಕ್ಕೆ ಕೆ.ಸಿ ವ್ಯಾಲಿ ನೀರು ಹರಿಯುತ್ತಿದೆ. ಆ ನೀರನ್ನು ಜನರು ಕುಡಿಯುತ್ತಿದ್ದು ಏನಾದರೂ ಸಮಸ್ಯೆ ಉಂಟಾದರೆ ಯಾರು ಗತಿ? ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಶಾಸಕರು ನ್ಯಾಯಾಲಯಕ್ಕೆ ಹೋಗಿ ಅನುದಾನ ಪಡೆಯುವಂಥ ಪರಿಸ್ಥಿತಿಯನ್ನು ಈ ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಶಕ್ತಿ ತೋರಿಸುತ್ತೇವೆ

ಕಾರ್ಯಕ್ರಮ ಆಯೋಜಕ ಶ್ರೀನಿವಾಸ್ ಮಾತನಾಡಿ, ಕೆ.ಸಿ.ವ್ಯಾಲಿ ನೀರು ಉಕ್ಕಿ ಹರಿದು ರೈತರಿಗೆ ಆಗಿರುವ ಸಮಸ್ಯೆ ವಿವರಿಸಿದರು. ಕೆ.ಸಿ.ವ್ಯಾಲಿ ಹೆಸರಲ್ಲಿ ರಮೇಶ್ ಕುಮಾರ್ ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಏನೆಂಬುದನ್ನು ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ತೋರಿಸುತ್ತೇವೆ. ಮುಂದೆ ಸಮ್ಮಿಶ್ರ ಸರ್ಕಾರ ಬರಲಿದೆ ಎಂದರು.

ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಸದಸ್ಯ ರಾಕೇಶ್, ಮುಖಂಡರಾದ ದಿಂಬ ನಾಗರಾಜಗೌಡ, ವಿಶ್ವನಾಥ್ ಗೌಡ, ರಾಮಚಂದ್ರೇಗೌಡ, ಕುಮಾರ್ ಇದ್ದರು.