ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಸಿದ್ದಾಪುರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭವಾರ್ತೆ ಸಿದ್ದಾಪುರ
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಸಿದ್ದಾಪುರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ, ಪಳ್ಳಕೆರೆ, ಕೂಡುಗದ್ದೆ, ಸಿದ್ದಾಪುರ ಬಸ್ ನಿಲ್ದಾಣ, ಮಡಿಕೇರಿ ರಸ್ತೆ ಸೇರಿದಂತೆ ಕಣ್ಣಂಗಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಕೆಲ ವರ್ಷಗಳಿಂದ ದುರಸ್ತಿ ಕಾಣದೆ ಗುಂಡಿಬಿದ್ದಿದ್ದು, ಕೆಸರುಗದ್ದೆಯಂತೆ ಪರಿವರ್ತನೆಗೊಂಡಿದೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಪಾದಚಾರಿಗಳಿಗೆ ಓಡಾಡಲು ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಪರಿಶೀಲಿಸಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಳೆ ಕ್ಷೀಣಿಸಿದ ಬಳಿಕ ಈ ರಸ್ತೆಗಳನ್ನು ಮರು ಡಾಂಬರೀಕರಣಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.ಈ ಸಂದರ್ಭ ಮಾತನಾಡಿದ ಶಕ್ತಿ ಕೇಂದ್ರದ ಅಧ್ಯಕ್ಷ ರೂಪೇಶ್, ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಅವ್ಯವಸ್ಥೆ ಕುರಿತು ಫೋಟೋ ಸಮೇತ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಗಿದ್ದು, ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಭರವಸೆ ನೀಡಿದ್ದಾರೆ ಎಂದರು.ಪಿಡಿಓ ಸತೀಶ್ ಮಾತನಾಡಿ, ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಹದಗೆಟ್ಟಿರುವ ಗ್ರಾಮೀಣ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಮನವಿ ನೀಡಲಾಗಿದೆ. ಇದನ್ನು ಪರಿಶೀಲಿಸಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳನ್ನು ಸಂಬಂಧಪಟ್ಟ ಇಲಾಖೆ ಮುಖಾಂತರ ದುರಸ್ತಿಪಡಿಸಲು ಗಮನ ಸೆಳೆಯುತ್ತೇವೆ. ಜೊತೆಗೆ ಪಂಚಾಯಿತಿ ಅಧೀನಕ್ಕೆ ಬರುವ ರಸ್ತೆಗಳನ್ನು ಗುರುತಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಿಜಿತ್ ಅನಿಲ್ ಶೆಟ್ಟಿ, ಹರಿದಾಸ್, ಉದಯ, ಅಯ್ಯಪ್ಪ, ನಿತೀಶ್, ರಿಜು, ಮಣಿ, ಸ್ಮಿತಾ , ಕವಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.