ಸಾರ್ವಜನಿಕ ಶೌಚಾಲಯ ದುರಸ್ತಿಗೆ ಆಗ್ರಹ

| Published : Apr 05 2025, 12:49 AM IST

ಸಾರಾಂಶ

ಪಟ್ಟಣದ 10ನೇ ವಾರ್ಡ್‌ನ ಮಾರುಕಟ್ಟೆ ಶಾಲೆ ಬಳಿಯ ಸಾರ್ವಜನಿಕ ಮಹಿಳಾ ಶೌಚಾಲಯ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪುರಸಭೆ ಕಚೇರಿ ಮುಂದೆ ಧಾವಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜರುಗಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ 10ನೇ ವಾರ್ಡ್‌ನ ಮಾರುಕಟ್ಟೆ ಶಾಲೆ ಬಳಿಯ ಸಾರ್ವಜನಿಕ ಮಹಿಳಾ ಶೌಚಾಲಯ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪುರಸಭೆ ಕಚೇರಿ ಮುಂದೆ ಧಾವಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜರುಗಿತು.

ಸ್ಥಳೀಯ ನಿವಾಸಿ ಗಂಗಮ್ಮ ಮಾತನಾಡಿ, ಇಲ್ಲಿನ ಮಹಿಳಾ ಸಾರ್ವಜನಿಕ ಶೌಚಾಲಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಸ್ವಚ್ಛತೆ ಮರಿಚಿಕೆಯಾಗಿದೆ. ಬೋರ್ ಕೆಟ್ಟುಹೋಗಿದ್ದು, ಸಮರ್ಪಕ ನೀರಿನ ವ್ಯವಸ್ಥೆಯಿಲ್ಲ. ವಿದ್ಯುತ್ ದೀಪಗಳು ಕೆಟ್ಟು ನಿಂತಿದ್ದು ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಂತಾಗಿದೆ. ನಿರ್ವಹಣೆಯ ಕೊರತೆಯಿಂದಾಗಿ ಶೌಚಾಲಯದ ಕುಣಿ ತುಂಬಿ ಹೊಲಸು ರಸ್ತೆಗೆ ಹರಿಯುತ್ತದೆ. ಮಹಿಳೆಯರು ಶೌಚಾಲಯ ಬಳಸದಷ್ಟು ಪರಿಸರ ಕೆಟ್ಟುಹೋಗಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಆ ಸಮಯಕ್ಕಷ್ಟೇ ಸ್ವಚ್ಛಗೊಳಿಸಿ ಹೋಗುತ್ತಾರೆ, ಹೊರೆತು ಸರಿಯಾದ ನಿರ್ವಹಣೆ ಕೈಗೊಳ್ಳುತ್ತಿಲ್ಲ. ಇದರಿಂದ ಸ್ಥಳೀಯ ಮಹಿಳೆಯರಿಗೆ ಶೌಚಕ್ಕೆ ತೆರಳಲು ತುಂಬಾ ಸಮಸ್ಯೆಯಾಗಿದೆ. ಈ ಕುರಿತು ತಾವು ಗಮನ ಹರಿಸಿ ಶೌಚಾಲಯ ದುರಸ್ತಿಗೊಳಿಸಿ ಸುವ್ಯವಸ್ಥೆಯಿಂದ ನಿರ್ವಹಿಸಲು ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶೌಚಾಲಯ ಬಳಿಯ ನಿವಾಸಿಗಳಾದ ಲಕ್ಷ್ಮಿ, ಸತ್ಯಮ್ಮ ಮೊದಲಾದವರು ಮಾತನಾಡಿ, ಶೌಚಾಲಯದ ನೀರು ಮನೆ ಮುಂದೆ ಹರಿದು ಬಂದು ದುರ್ವಾಸನೆ ಹರಡುತ್ತಿದೆ. ಶೌಚಾಲಯ ಎದುರು ಎರಡು ಓಣಿಗಳ ಜನ ಇಲ್ಲಿಗೆ ಬಂದು ಕಸ ಹಾಕುವುದರಿಂದ ಗಲೀಜು, ದುರ್ನಾತ ಹೆಚ್ಚಿದೆ. ತಿಪ್ಪೆಕಸವನ್ನು ನಿತ್ಯವೂ ಸ್ವಚ್ಛಗೊಳಿಸಬೇಕು. ಕಸ ತಿಪ್ಪೆಗೆ ಹಾಕದೆ ಕಸದ ವಾಹನಕ್ಕೆ ಹಾಕುವಂತೆ ಪುರಸಭೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಶೌಚಾಲಯವನ್ನು ಸ್ವಚ್ಛವಾಗಿಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಶೌಚಾಲಯವನ್ನು ದುರಸ್ತಿಗೊಳಿಸಲಾಗುವುದು. ಪ್ರತಿಯೊಂದು ಮನೆಯವರು ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಳ್ಳಬೇಕು. ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.ಈ ಸಂದರ್ಭ ಸ್ಥಳೀಯ ನಿವಾಸಿಗಳಾದ ಲಕ್ಷ್ಮಮ್ಮ, ರೇಣುಕಮ್ಮ, ಸುಮಂಗಳಮ್ಮ, ಸಣ್ಣಕ್ಕಿ ಲಕ್ಷ್ಮಮ್ಮ, ಪುಟಾಣಿ ಗಂಗಮ್ಮ, ಹೂಳಮ್ಮ ಇತರರಿದ್ದರು.