ಕಬ್ಬು, ಈರುಳ್ಳಿ, ಬಾಳೆಹಣ್ಣು, ದಾಳಿಂಬೆ ಸಹಿತ ತರಕಾರಿ ಮತ್ತು ಅನೇಕ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆಂದು ಪಟ್ಟಣ ಹಾಗೂ ಇತರೆಡೆ ಸಾಗಿಸಲು ರೈತರಿಗೆ ಸೂಕ್ತ ರಸ್ತೆ ಮಾರ್ಗವೇ ಇಲ್ಲದಂತಾಗಿದೆ
ಹಗರಿಬೊಮ್ಮನಹಳ್ಳಿ: ಪಟ್ಟಣದಿಂದ ತಾಲೂಕಿನ ಹಳ್ಳಿಗಳ ಬಹುತೇಕ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಅದರಲ್ಲೂ ತಾಲೂಕಿನ ಬಹು ದೊಡ್ಡ ಆರ್ಥಿಕ ಹೋಬಳಿ ಕೇಂದ್ರವಾದ ತಂಬ್ರಹಳ್ಳಿಯಿಂದ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆ ದ್ವಿಚಕ್ರ ವಾಹನಗಳ ಓಡಾಟಕ್ಕೂ ಬಾರದಂತಾಗಿದೆ. ರಸ್ತೆ ಸ್ಥಿತಿಗಳು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಕಿಡಿಕಾರಿದರು.
ಗ್ರಾಮೀಣ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಿಂದ ಪಾದಯಾತ್ರೆ ಮೂಲಕ ಪಟ್ಟಣಕ್ಕೆ ಆಗಮಿಸಿದ್ದ ಪ್ರತಿಭಟನಾಕಾರರು ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ತಂಬ್ರಹಳ್ಳಿ ಹೋಬಳಿ ಭಾಗದ ಏತ ನೀರಾವರಿ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆಯುವ ಕಬ್ಬು, ಈರುಳ್ಳಿ, ಬಾಳೆಹಣ್ಣು, ದಾಳಿಂಬೆ ಸಹಿತ ತರಕಾರಿ ಮತ್ತು ಅನೇಕ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆಂದು ಪಟ್ಟಣ ಹಾಗೂ ಇತರೆಡೆ ಸಾಗಿಸಲು ರೈತರಿಗೆ ಸೂಕ್ತ ರಸ್ತೆ ಮಾರ್ಗವೇ ಇಲ್ಲದಂತಾಗಿದೆ ಎಂದು ದೂರಿದರು.
ರಸ್ತೆಯುದ್ದಕ್ಕೂ ಮೊಣಕಾಲುದ್ದ ತಗ್ಗು ಬಿದ್ದಿರುವ ಗುಂಡಿಗಳಲ್ಲಿ ಗರಸು ಸುರಿದು ಲೋಕೋಪಯೋಗಿ ಇಲಾಖೆ ತಾತ್ಕಾಲಿಕವಾಗಿ ಸರಿಪಡಿಸುತ್ತಾರೆ. ಮಳೆಯೇ ಇಲ್ಲದ ಕಾರಣಕ್ಕೆ ರಸ್ತೆ ಮೇಲಿನ ಗರಸು ಹಾರಿ ಹೋಗಿ ಮೊದಲಿನ ಸ್ಥಿತಿಗೇ ರಸ್ತೆ ಬರುತ್ತದೆ. ಹಾರಿದ ಗರಸಿನ ಧೂಳು ರಸ್ತೆ ಪಕ್ಕದ ಜಮೀನುಗಳಲ್ಲಿ ಬಿತ್ತಲಾಗಿರುವ ನಾನಾ ಬೆಳೆಗಳನ್ನು ಹಾಳು ಮಾಡುತ್ತಿದೆ. ರಸ್ತೆ ಡಾಂಬರೀಕರಣಗೊಳಿಸುವ ಮೂಲಕ ರೈತರ ಬೆಳೆಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಸವನಗೌಡ ಮಾತನಾಡಿ, ಕೂಡಲೇ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೂ ಪಾದಯಾತ್ರೆ ಕೈಗೊಂಡು ಪ್ರತಿಭಟನೆ ನಡೆಸಲಾಗುತ್ತದೆ. ಮುಂದುವರೆದು ವಿಧಾನಸೌಧಕ್ಕೂ ಮುತ್ತಿಗೆ ಹಾಕಿ ಪ್ರತಿಭಟನೆಗೆ ಉಗ್ರ ರೂಪ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕಿನ ರಸ್ತೆ ದುರವಸ್ತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವ್ಯಂಗ್ಯಚಿತ್ರ ಮತ್ತು ಚಿತ್ರಕಲೆಯ ಮೂಲಕ ಜನಜಾಗೃತಿ ಕೈಗೊಂಡಿದ್ದ ಕಲಾವಿದರಾದ ಚಿಂತ್ರಪಳ್ಳಿ ಕೊಟ್ರೇಶ್ ಮತ್ತು ಆನಂದಕಡ್ಲಿ ಅವರನ್ನು ಸನ್ಮಾನಿಸಲಾಯಿತು. ಉಪ ತಹಸೀಲ್ದಾರ್ ಶಿವಕುಮಾರ ಗೌಡ ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಸತೀಶ್ ನಾಯ್ಕ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್‌ನ ವೈ.ಸುರೇಶ್, ತಾಪಂ ಮಾಜಿ ಇಒ ವೆಂಕೋಬಪ್ಪ, ಮಾಜಿ ಪಿಡಿಒ ತೋಟಯ್ಯ, ಅಜೀಜಸಾಬ್, ಗ್ಯಾರಂಟಿ ಸಮಿತಿಯ ಸದಸ್ಯ ಗೌರಜ್ಜನವರ ಗಿರೀಶ್, ತಾಪಂ ಮಾಜಿ ಸದಸ್ಯ ಪಿ.ಸುರೇಶ್ ಹಾಗೂ ಪಾಂಡು ನಾಯ್ಕ ಸೇರಿದಂತೆ ತಂಬ್ರಹಳ್ಳಿ ಸುತ್ತಲಿನ ನೂರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.