ಸಹಕಾರಿ ಕ್ಷೇತ್ರದಲ್ಲೂ ಮೀಸಲು ನಿಗದಿಗೆ ಆಗ್ರಹ

| Published : May 15 2024, 01:32 AM IST

ಸಹಕಾರಿ ಕ್ಷೇತ್ರದಲ್ಲೂ ಮೀಸಲು ನಿಗದಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಡಿಸಿಸಿ ಬ್ಯಾಂಕಿನಲ್ಲೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಿಗಾಗಿ ಸಹಕಾರಿ ಕಾಯ್ದೆ ತಿದ್ದುಪಡಿಗೆ ಸಾಮಾಜಿಕ ಸಂಘರ್ಷ ಸಮಿತಿ ಸಲಹೆಯಿತ್ತು, ಇತರೆ ಸಹಕಾರಿ ಸಂಘಗಳಲ್ಲೂ ಮೀಸಲಾತಿ ಜಾರಿ ಮಾಡಬೇಕೆಂದು ಸಮಿತಿ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇರುವ ಮೀಸಲು ನಿಯಮದಂತೆಯೇ ಡಿಸಿಸಿ ಬ್ಯಾಂಕ್ ಸೇರಿದಂತೆ ಇತರೆ ಸಹಕಾರಿ ಸಂಘಗಳಲ್ಲೂ ಮೀಸಲಾತಿ ಜಾರಿ ಮಾಡಬೇಕೆಂದು ಸಾಮಾಜಿಕ ಸಂಘರ್ಷ ಸಮಿತಿ ಆಗ್ರಹಿಸಿದೆ.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಕುಮಾರ್,ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ಅನುಗುಣವಾಗಿ ಜಿಪಂ, ತಾಪಂ, ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದಲ್ಲಿ ಮೀಸಲಾತಿ ಇದೆ. ಮಹಾನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿಯಲ್ಲಿಯೂ ಮೀಸಲು ಇದೆ. ಆದರೆ ಸಹಕಾರಿ ಕ್ಷೇತ್ರವನ್ನು ಮೀಸಲು ನಿಯಮದಿಂದ ಹೊರಗಿಡಲಾಗಿದೆ. ಇದರಿಂದಾಗಿ ಬರೀ ಬಲಾಢ್ಯ ಸಮುದಾಯ ಮಾತ್ರ ಅಧಿಕಾರ ಅನುಭವಿಸಲು ಸಾಧ್ಯವಾಗಿದ್ದು, ಶೋಷಿತರು ಅವಕಾಶ ವಂಚಿತರಾಗಿದ್ದಾರೆ. ಸ್ವತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಹಕಾರಿ ಕ್ಷೇತ್ರದಲ್ಲಿ ಶೋಷಿತರಿಗೆ ಪ್ರಾತಿನಿಧ್ಯ ಸಿಗದೇ ಇರುವುದು ನೋವಿನ ಸಂಗತಿ. ಹಾಗಾಗಿ ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಕೃಷಿ ಉತ್ಪನ್ನ ಮಾರುಕಟ್ಟೆ, ಕರ್ನಾಟಕ ಬೀಜ ನಿಗಮ, ಹಾಗೂ ಇತರೆ ಸಹಕಾರಿ ಸಂಘಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಗೆ ಒಳಪಡಿಸಬೇಕೆಂದರು. ಇದಕ್ಕಾಗಿ ಸಹಕಾರ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವಂತೆ ಒತ್ತಾಯಿಸಿದರು.

ಸಹಕಾರ ಇಲಾಖೆಯ ಅಧೀನಕ್ಕೆ ಒಳಪಡುವ ಈ ಬ್ಯಾಂಕ್‍ಗಳಲ್ಲಿ ಇದುವರೆವಿಗೂ ಒಂದು ವರ್ಗ ಮಾತ್ರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಕೊಂಡು ಬಂದಿದೆ. ಇದರಿಂದ ಬೇರೆ ಜನಾಂಗದವರಿಗೆ ಅನ್ಯಾಯವಾಗಿದೆ. ಅಲ್ಲದೆ ಸರ್ಕಾರದ ವಿವಿಧ ರೀತಿಯ ಸೌಲಭ್ಯಗಳ ಪಡೆದುಕೊಳ್ಳುವಲ್ಲಿಯೂ ಶೋಷಿತ ಸಮುದಾಯ ಹಿಂದೆ ಬಿದ್ದಿದೆ. ಸಹಕಾರ ಇಲಾಖೆಗೆ ಚುನಾವಣೆಗಳು ಪ್ರಜಾಪ್ರಭುತ್ವದ ನಿಯಮದಡಿ ನಡೆಯುವುದರಿಂದ ಮೀಸಲು ನಿಗದಿ ಮಾಡುವುದು ಸರ್ಕಾರಕ್ಕೆ ಕಷ್ಟವೇನಲ್ಲ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಅಗತ್ಯ ನಿರ್ಣಯ ಕೈಗೊಂಡು ಸಹಕಾರ ಸಂಘಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗಧಿ ಮಾಡಿ ಸಾಮಾಜಿಕ ನ್ಯಾಯಯ ಕಲ್ಪಿಸಬೇಕೆಂದು ಕುಮಾರ್ ಆಗ್ರಹಿಸಿದರು.

ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ ಮಾಡಬೇಕು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮಹಿಳಾ ಸದಸ್ಯರಿಗೆ ರು.ಒಂದು ಲಕ್ಷ ರುಪಾಯಿ ಮೊತ್ತವ ಬಡ್ಡಿರಹಿತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾಮಾಜಿಕ ಸಂಘರ್ಷ ಸಮಿತಿ ಗೌರವಾಧ್ಯಕ್ಷ ಡಿ.ದುರುಗೇಶ್ ಮಾತನಾಡಿ, ಸಹಕಾರ ಇಲಾಖೆಯ ಅಧೀನಕ್ಕೆ ಒಳಪಡುವ ಈ ಬ್ಯಾಂಕ್‍ಗಳಲ್ಲಿ ಮೀಸಲಾತಿಯನ್ನು ನೀಡುವ ಸಂಬಂಧ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವನ್ನು ಶೀಘ್ರದಲ್ಲಿ ಭೇಟಿ ಮಾಡಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸ ಲಾಗುವುದೆಂದು ಎಚ್ಚರಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿನ ಆರು ತಾಲೂಕುಗಳಲ್ಲಿ ವಿತರಣೆ ಮಾಡಲಾದ ಕೃಷಿ ಸಾಲದಲ್ಲೂ ತಾರತಮ್ಯವೆಸಗಲಾಗಿದೆ. ಜಿಲ್ಲೆಗೆ 890 ಕೋಟಿ ರು.ಗಳನ್ನು ನಿಗದಿ ಮಾಡಿ 767.03 ಕೋಟಿ ರು. ವಿತರಣೆ ಮಾಡಲಾಗಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ ₹598.31 ಕೋಟಿ, ಎಸ್‌ಸಿಗೆ ₹115.90 ಕೋಟಿ ಎಸ್ಟಿಗೆ ₹52.82 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದೆ ಎಂದು ದುರುಗೇಶ್ ದೂರಿದರು.

ಸಾಮಾಜಿಕ ಸಂಘರ್ಷ ಸಮಿತಿರಾಜ್ಯ ಕಾರ್ಯದರ್ಶಿ ಚಿಕ್ಕಣ್ಣ, ಜಿಲ್ಲಾ ಸಂಚಾಲಕ ಪ್ರಹ್ಲಾದ್, ರಾಮಲಿಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.