ಸಾರಾಂಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆ ಯಲಬುರ್ಗಾ ತಾಲೂಕ ಘಟಕದ ವತಿಯಿಂದ ತಹಸೀಲ್ದಾರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗಪ್ಪ ಜಿ. ಬೆಣಕಲ್ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದುದ್ದಕ್ಕೂ ಸ್ವರ್ಗ ಸಿಗುತಿತ್ತು ಎಂಬ ಅಮಿತ್ ಶಾ ಅವರ ಹೇಳಿಕೆ ಅಂಬೇಡ್ಕರ್ ವಿರೋಧಿ ಮನೋಭಾವದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಅವರ ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಪುನಃ ಒತ್ತಿ ಹೇಳುತ್ತದೆ. ಅವರ ಹೇಳಿಕೆಯನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.ಈ ಸಂದರ್ಭ ತಾಲೂಕಾಧ್ಯಕ್ಷ ಕರಿಯಪ್ಪ ಮಣ್ಣಿನವರ, ಖಜಾಂಚಿ ಯಲ್ಲಪ್ಪ ಸಣ್ಣಿಗನವರ, ಉಪಾಧ್ಯಕ್ಷ ದಾದು ಎಲಿಗಾರ, ಮೌನೇಶ್ ಕೋನಸಾಗರ, ಬಸವರಾಜ ಅಳವಂಡಿ ಇದ್ದರು.ಗೃಹ ಸಚಿವರ ವಜಾಕ್ಕೆ ಆಗ್ರಹ:ರಾಜ್ಯಸಭೆಯಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅವರನ್ನು ಸಂಸದರ ಸ್ಥಾನದಿಂದ ವಜಾಗೊಳಿಸಬೇಕೆಂದು ಸಿಪಿಐಎಂಎಲ್ ಮುಖಂಡ ಜೆ. ಭಾರದ್ವಾಜ್ ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿ ಮೊದಲಿನಿಂದಲೂ ಸಂವಿಧಾನ ಬದಲಾವಣೆಗಾಗಿ ಹುನ್ನಾರ ನಡೆಸಿದೆ. ಸಂವಿಧಾನ ವಿರೋಧಿ ಪಕ್ಷವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಿಂದಲೇ ಅಧಿಕಾರಕ್ಕೆ ಬಂದು ಅವರನ್ನೇ ಕಡೆಗಣಿಸಿ ಮಾತನಾಡುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯ ರಾಜಕೀಯ ದುರುದ್ದೇಶವನ್ನು ಖಂಡಿಸಿ ಭಾರತದ ನಾಗರಿಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದು ಹೇಳಿದದ್ದಾರೆ.