ರೈತರನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ಕಬಳಿಸಲು ಷಡ್ಯಂತ್ರ : ಶಾಸಕ ಇಕ್ಬಾಲ್ ಹುಸೇನ್ ರಾಜೀನಾಮೆಗೆ ಆಗ್ರಹ

| N/A | Published : Jan 28 2025, 12:50 AM IST / Updated: Jan 28 2025, 11:25 AM IST

Iqbal Hussain
ರೈತರನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ಕಬಳಿಸಲು ಷಡ್ಯಂತ್ರ : ಶಾಸಕ ಇಕ್ಬಾಲ್ ಹುಸೇನ್ ರಾಜೀನಾಮೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

 ಕನಕಪುರ ತಾಲೂಕಿನ ಹೊಂಗಾಣಿದೊಡ್ಡಿ ಗ್ರಾಮದ ರೈತರನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ಕಬಳಿಸಲು ಷಡ್ಯಂತ್ರ ನಡೆಸಿರುವ ಶಾಸಕ ಇಕ್ಬಾಲ್ ಹುಸೇನ್ ರಾಜೀನಾಮೆಗೆ ಆಗ್ರಹಿಸಿ ಕನಕಪುರದ ಹೊಂಗಾಣಿದೊಡ್ಡಿಯಿಂದ ರಾಮನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ಮುಖಂಡ ಗೌತಮ್ ಗೌಡ ತಿಳಿಸಿದರು.

ರಾಮನಗರ: ಕನಕಪುರ ತಾಲೂಕಿನ ಹೊಂಗಾಣಿದೊಡ್ಡಿ ಗ್ರಾಮದ ರೈತರನ್ನು ಒಕ್ಕಲೆಬ್ಬಿಸಿ ಭೂಮಿಯನ್ನು ಕಬಳಿಸಲು ಷಡ್ಯಂತ್ರ ನಡೆಸಿರುವ ಶಾಸಕ ಇಕ್ಬಾಲ್ ಹುಸೇನ್ ರಾಜೀನಾಮೆಗೆ ಆಗ್ರಹಿಸಿ ಕನಕಪುರದ ಹೊಂಗಾಣಿದೊಡ್ಡಿಯಿಂದ ರಾಮನಗರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ಮುಖಂಡ ಗೌತಮ್ ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಕ್ಬಾಲ್ ಹುಸೇನ್ ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ತನಿಖೆ ಎದುರಿಸಬೇಕು. ಖರೀದಿಸಿರುವ ರೈತರ ಭೂಮಿಯನ್ನು ಹಿಂದಿರುಗಿಸಬೇಕು. ಈಗಾಗಲೇ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಇಕ್ಬಾಲ್ ಹುಸೇನ್‌, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಭಾವಿ ಶಾಸಕರಾಗಿರುವ ಕಾರಣ ಪ್ರಕರಣದ ತನಿಖೆ ದಿಕ್ಕು ತಪ್ಪದಿರಲು ಇಡೀ ಪ್ರಕರಣವನ್ನು ಇಡಿ ಅಥವಾ ಸಿಬಿಐ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಿಎಂ ಕ್ಷೇತ್ರದಲ್ಲಿ ಮುಡಾ ಹಗರಣ ಹೆಚ್ಚು ಸುದ್ದು ಮಾಡಿತ್ತು. ಇದರ ವಿರುದ್ಧ ಎನ್‌ಡಿಎ ಮೈತ್ರಿಕೂಟದಲ್ಲಿ ಪಾದಯಾತ್ರೆ ಮಾಡಿದ್ದೆವು. ಡಿಸಿಎಂ ಕ್ಷೇತ್ರದಲ್ಲಿ ಶಾಸಕರೊಬ್ಬರು ಇಡೀ ಗ್ರಾಮವನ್ನೇ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಗಳ ಕೈವಾಡವಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಪ್ರಭಾವಿ ಶಾಸಕರಾಗಿರುವುದರಿಂದ ಅಧಿಕಾರಿಗಳು ಹೆದರಿ ಕೆಲಸ ಮಾಡಿಕೊಟ್ಟಿರುವ ಅನುಮಾನವಿದೆ. ಈ ಸಂಬಂಧ ಅಧಿಕಾರಿಗಳು ಧೈರ್ಯದಿಂದ ಮುಂದೆ ಬಂದು ಮಾಹಿತಿ ನೀಡಬೇಕು ಅಥವಾ ಹಣ ಪಡೆದು ಪೌತಿ ಖಾತೆ ಮಾಡಿಕೊಟ್ಟರೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕರು ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರಿಗೆ ಮಂಜೂರಾಗಬೇಕಾದ ಭೂಮಿಯನ್ನು ಕಬಳಿಸಿದ್ದಾರೆ. ಇದು ಉಳುವವನೇ ಭೂಮಿಯ ಒಡೆಯ ಕಾಯ್ದೆ ಉಲ್ಲಂಘನೆ ಮಾಡಿದಂತಾಗಿದೆ. ಇಡೀ ಗ್ರಾಮವನ್ನೇ ಖರೀದಿಸಿರುವುದು ಕಾಂಗ್ರೆಸ್ ಪಕ್ಷ ತಲೆ ತಗ್ಗಿಸಬೇಕಾದ ವಿಷಯ. ಕನಕಪುರ, ಹಾರೋಹಳ್ಳಿಯಲ್ಲಿ ಭೂ ನ್ಯಾಯ ಮಂಡಳಿ ರಚನೆ ಮಾಡದೇ ರಿಪಬ್ಲಿಕ್ ಕನಕಪುರ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ರೈತರಿಗೆ ಸಿಗಬೇಕಾದ ಭೂಮಿ ಅವರಿಗೇ ಸಿಗಬೇಕು. ಶಾಸಕರ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡಲಿದೆ. ಕನಕಪುರದಿಂದ ರಾಮನಗರದವರೆಗೂ ಪಾದಯಾತ್ರೆ ಮಾಡಲಿದ್ದೇವೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. 30 ವರ್ಷದ ಹಿಂದೆಯೇ ರೈತರಿಗೆ ಭೂಮಿ ಮಂಜೂರಾಗಿದೆ. ಹಕ್ಕುಪತ್ರ ನೀಡಲು ಸಿದ್ದವಿದೆ. ಆದರೆ, ರೈತರಿಗೆ ಕಡಿಮೆ ಪ್ರಮಾಣದ ಭೂಮಿ ಮಂಜೂರು ಮಾಡಿದ್ದಾರೆ ಎಂದು ಹಕ್ಕುಪತ್ರವನ್ನು ತಿರಸ್ಕರಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈಗ ಅದೇ ಹಳೆಯ ಹಕ್ಕುಪತ್ರವನ್ನು ನಾವು ವಿತರಿಸುತ್ತಿದ್ದೇವೆ ಎಂದು ಜನರ ದಿಕ್ಕುತಪ್ಪಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಯ್ದೆಯ ನಿಯಾಮವಳಿಗಳನ್ನು ಗಾಳಿಗೆ ತೂರಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ಕೃತ್ಯ ಎಸಗಲಾಗಿದೆ. ಅಧಿಕಾರಿಗಳು ಜನಪರ ಕೆಲಸ ಮಾಡಬೇಕೆ ಹೊರತು, ಜನಪ್ರತಿನಿಧಿಗಳ ಪರ ಅಲ್ಲ. ಈಗಾಗಲೇ ರಾಜ್ಯದಲ್ಲಿ ಹಲವು ಅಧಿಕಾರಿಗಳು ಸಚಿವರ ಹೆಸರಗಳನ್ನು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ರಾಮನಗರದ ಅಧಿಕಾರಿಗಳಿಗೆ ಬರುವುದು ಬೇಡ ಎಂದು ಎಂದು ಗೌತಮ್ ಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ತಾಲೂಕು ಅಧ್ಯಕ್ಷ ಜಗದೀಶ್, ಚಂದ್ರಶೇಖರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಮುಖಂಡರಾದ ಸುರೇಶ್, ಶಿವಾನಂದ, ಕಿಶನ್, ನಾಗೇತ್, ಚೇತನ್, ಚಂದನ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಪಾದಯಾತ್ರೆ ನಿರ್ಧಾರಕ್ಕೆ ಶಾಸಕ ಇಕ್ಬಾಲ್ ತಿರುಗೇಟು

ರಾಮನಗರ: ಈಗ ಬಿಜೆಪಿಯವರಿಗೆ ಏನೂ ಕೆಲಸ ಇಲ್ಲ. ಹಾಗಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಅವರು ಪಾದಯಾತ್ರೆಯಾದರೂ ಮಾಡಲಿ ಅಥವಾ ಪಾದಾನ ತಲೆ ಮೇಲೆ ಇಟ್ಟುಕೊಂಡು ತಿರುಗಾಡಲಿ ಎಂದು ಬಿಜೆಪಿ ನಾಯಕರಿಗೆ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರೈತನ ಮಗ. ಯಾವ ರೈತನ ಭೂಮಿಯನ್ನು ಕಬಳಿಸಿಲ್ಲ. ಸತ್ಯಾಂಶ ಗೊತ್ತಾದ ಮೇಲೆ ಯಾರು ತಲೆ ಬಗ್ಗಿಸುತ್ತಾರೆ ಎಂಬುದನ್ನು ನೋಡೋಣ. ಬಿಜೆಪಿಯವರಿಗೆ ಶಕ್ತಿ ಇದ್ದರೆ ರೈತನಿಗೆ ಒಂದು ಗುಂಟೆ ಜಮೀನು ಕೊಡಿಸಲಿ. ಇಲ್ಲವೆ ಹಕ್ಕು ಪತ್ರ ಕೊಡಿಸಿ ತೋರಿಸಲಿ ನೋಡೋಣ. ನಿಮಗೆ ಶಕ್ತಿ ಇದ್ದರೆ ಅದಕ್ಕೆ ಬಳಸಿ ನೋಡೋಣ. ಎಸಿ-ಡಿಸಿ ಮುಂದೆ ಸವಾಲು ಹಾಕಿ ರೈತರ ಕೆಲಸ ಮಾಡಿಸಲಿ, ನನ್ನ ಮೇಲೆ ಸವಾಲು ಹಾಕಿದರೆ ಏನು ಪ್ರಯೋಜನ ಎಂದು ಕೇಳಿದರು.