ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ರಾಜೀನಾಮೆ ಆಗ್ರಹ

| Published : Mar 21 2024, 01:01 AM IST

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ರಾಜೀನಾಮೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಟಿಎಪಿಸಿಎಂಎಸ್‌ನ 14 ಮಂದಿ ನಿರ್ದೇಶಕರಲ್ಲಿ 8 ನಿರ್ದೇಶಕರು ಅಧ್ಯಕ್ಷ ಬಿ.ಎಲ್.ದೇವರಾಜು ಅವರ ರಾಜೀನಾಮೆಗೆ ಕಳೆದ ಒಂದು ವರ್ಷದಿಂದಲೂ ಒತ್ತಾಯಿಸುತ್ತಿದ್ದೇವೆ. ಸಂಘದ ಸಭೆಗೆ ಅಧ್ಯಕ್ಷರೇ ಗೈರು ಹಾಜರಾಗಿದ್ದೇವೆ. 42 ತಿಂಗಳು ಕಳೆದಿದ್ದರೂ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನೈತಿಕತೆ ಪ್ರದರ್ಶಿಸುವಂತೆ 8 ಮಂದಿ ನಿರ್ದೇಶಕರು ಒತ್ತಾಯಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸಂಘದ ನಿರ್ದೇಶಕ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್ ನೇತೃತ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ 8 ಮಂದಿ ನಿರ್ದೇಶಕರು, ಅಧ್ಯಕ್ಷ ಬಿ.ಎಲ್.ದೇವರಾಜು ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ, ಸಂಘದ 14 ಮಂದಿ ನಿರ್ದೇಶಕರಲ್ಲಿ 8 ನಿರ್ದೇಶಕರು ಬಿ.ಎಲ್. ದೇವರಾಜು ಅವರ ರಾಜೀನಾಮೆಗೆ ಕಳೆದ ಒಂದು ವರ್ಷದಿಂದಲೂ ಒತ್ತಾಯಿಸುತ್ತಿದ್ದೇವೆ. ಸಂಘದ ಸಭೆಗೆ ಅಧ್ಯಕ್ಷರೇ ಗೈರು ಹಾಜರಾಗಿದ್ದೇವೆ. 42 ತಿಂಗಳು ಕಳೆದಿದ್ದರೂ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ ಎಂದು ದೂರಿದರು.

ನಿರ್ದೇಶಕರ ಅಸಹಕಾರದ ನಡುವೆಯೂ ರಾಜಕೀಯ ಮಹತ್ವಾಕಾಂಕ್ಷೆಯಿಂದ ಅಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಸಂಸ್ಥೆ ಅಭಿವೃದ್ಧಿಗಿಂತಲೂ ಅಧಿಕಾರವೇ ಮುಖ್ಯವಾಗಿದೆ. ಡಿಸಿಸಿ ಬ್ಯಾಂಕ್ , ಮನ್ಮುಲ್ ಹಾಗೂ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರು ತಮ್ಮಲ್ಲಿ ಆದ ಒಪ್ಪಂದಕ್ಕೆ ಬದ್ಧರಾಗಿ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದರು.

ಬಿ.ಎಲ್.ದೇವರಾಜು ಕ್ಷೇತ್ರದ ಹಿರಿಯ ರಾಜಕಾರಣಿ. ಮೂರು ಸಲ ಶಾಸನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದವರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾಗಿ ಮತ್ತು ಜಿಪಂ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಅವರು ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಜವಾಬ್ದಾರಿಯಿಂದ ನಡೆದುಕೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಜಿ.ಮೋಹನ್, ನಿರ್ದೇಶಕರಾದ ಕೊರಟೀಕೆರೆ ದಿನೇಶ್, ಟಿ.ಬಲದೇವ್, ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ಸುಕನ್ಯ ಹಾಗೂ ಮುಖಂಡ ರಾಮಕೃಷ್ಣೇಗೌಡ ಇದ್ದರು.