ಸಾರಾಂಶ
ಅಕ್ರಮ ನಿವೇಶನ ಹಂಚಿಕೆ ಮತ್ತು ಭೂದರೋಡೆ ನಡೆದಿದೆ. ಈ ಸಂಬಂಧ ಕೂಡಲೇ ಸರ್ಕಾರ ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿದ್ದು, ಕೋಟ್ಯಂತರ ರೂ. ವಂಚಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿ ಇದರ ಜವಾಬ್ದಾರಿ ಹೊತ್ತ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆಗ್ರಹಿಸಿದರು.ಅಕ್ರಮ ನಿವೇಶನ ಹಂಚಿಕೆ ಮತ್ತು ಭೂದರೋಡೆ ನಡೆದಿದೆ. ಈ ಸಂಬಂಧ ಕೂಡಲೇ ಸರ್ಕಾರ ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ, ತಪ್ಪಿತಸ್ಥರನ್ನು ಜೈಲಿಗಟ್ಟಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವುದಾಗಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಈ ಹಗರಣ ಸಂಬಂಧ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಅಧಿಕಾರಿಗಳು ತನಿಖೆ ನಡೆಸದಂತೆ ಕಾಣದ ಕೈಗಳು ತಡೆಯುತ್ತಿವೆ. ಹೀಗಾಗಿ ಇದರ ಜವಾಬ್ದಾರಿ ಹೊತ್ತ ಸಚಿವ ಬೈರತಿ ಸುರೇಶ್ ರಾಜೀನಾಮ ನೀಡಬೇಕು. ತಪ್ಪಿದರೆ ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಎಂಡಿಎಯಲ್ಲಿ ಸಾವಿರಾರು ಕೋಟಿ ರೂ.ಗಳ ಹಗರಣದ ವಿರುದ್ದ ಪಾರದರ್ಶಕ ತನಿಖೆ ನಡೆಸಬೇಕು. ಅದನ್ನು ಬಿಟ್ಟು ಪ್ರಾಮಾಣಿಕವಾಗಿ ತನಿಖೆ ನಡೆಸುವ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡಬಾರದು. ಅಲ್ಲದೆ, ಶೇ. 50ರ ಅನುಪಾತದಲ್ಲಿ ಅಕ್ರಮ ನಿವೇಶನಗಳ ಫಲಾನುಭವಿಗಳ ಪಟ್ಟಿ ತಯಾರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅತೀ ಶೀಘ್ರದಲ್ಲೇ ಈ ನಿವೇಶನಗಳ ಮಂಜೂರಾತಿ ರದ್ದುಗೊಳಿಸುವಂತೆ ಕೋರಿ ಹೈ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದರು.ನಂತರ, ಈ ರೀತಿ ನಿವೇಶನ ಪಡೆದವರು ಸ್ವಯಂ ಪ್ರೇರಿತರಾಗಿ ನಿವೇಶನ ಹಿಂದಿರುಗಿಸಲು ಅವಕಾಶ ನೀಡಬೇಕು. ಈ ಅನುಪಾತದಡಿ ನಿರ್ದಿಷ್ಟ ಅವಧಿ ನಿಗದಿಪಡಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು. ತಪ್ಪಿದರೆ ಅಕ್ರಮ ನಿವೇಶನ ಪಡೆದವರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಅರುಣ್ ಕುಮಾರ್ ಹಾಗೂ ಪ್ರಶಾಂತ್ ಇದ್ದರು.