ಜಿಲ್ಲೆಯ ರೈತರ ವಿವಿಧ ಜ್ವಲಂತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ ರೈತರ ವಿವಿಧ ಜ್ವಲಂತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ಬೀದರ್ ನಗರದ ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ರೈತರು, ಸಂಘಟಕರು ಕೆಲಹೊತ್ತು ಬೀದರ್ - ಭಾಲ್ಕಿ, ಬೀದರ್ - ಹುಮನಾಬಾದ್ ಮಾರ್ಗದ ಹೆದ್ದಾರಿ ತಡೆದರು. ಬರಪೀಡಿತ ಜಿಲ್ಲೆ ಘೋಷಿಸಿ, ರೈತರ ಸಾಲಮನ್ನಾ ಮಾಡಿ ಎಂಬಿತ್ಯಾದಿ ಘೋಷಣೆ ಕೂಗಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ರೈತರು ಪ್ರತಿವರ್ಷ ಅತಿವೃಷ್ಟಿ, ಅನಾವೃಷ್ಟಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವರ್ಷವು ಮುಂಗಾರು ಮಳೆ ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿ ಪರಿಗಣಿಸಿ ಬೀದರ್ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು. ಬಿಎಸ್‌ಎಸ್‌ಕೆ ಕಾರ್ಖಾನೆ ಮಾರಾಟ ಮಾಡದೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪುನರಾರಂಭಿಸಬೇಕು. ಕಾರ್ಮಿಕರ ಬಾಕಿ ವೇತನ ಸೇರಿದಂತೆ ಶಾಸನಬದ್ಧವಾಗಿ ಪಾವತಿಸಬೇಕಾದ ಎಲ್ಲ ಹಣವನ್ನು ಕೂಡಲೇ ಪಾವತಿಸಬೇಕು. ಇದಲ್ಲದೇ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ವೈಜ್ಞಾನಿಕ ರೀತಿಯಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಜನರು, ಜಾನುವಾರುಗಳು ಹಾಗೂ ಎತ್ತಿನ ಬಂಡಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಗೆ ಇಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು.ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಮಹಿಳಾ ಘಟಕದ ಶೋಭಾವತಿ ಕಾರಭಾರಿ, ರಾಜ್ಯ ಪ್ರತಿನಿಧಿ ಶೇಷರಾವ ಕಣಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಕಾರಂಜಾ ಮುಳುಗಡೆ ಹಿತರಕ್ಷಣಾ ಸಮಿತಿಯ ರಾಜ ಕುಮಾರ ಕೋಸಂ, ಕಾರಂಜಾ ಮುಳುಗಡೆ ಸಂತ್ರಸ್ತರ ಅಧ್ಯಕ್ಷ ಚಂದ್ರಶೇಖರ ಪಾಟೀಲ, ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡೆ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕರೆಪ್ಪ ಪಾರಾ, ಬಿಎಸ್‌ಎಸ್‌ಕೆ ಎಸ್‌ಸಿ/ಎಸ್‌ಟಿ ಯೂನಿಯನ್ ಅಧ್ಯಕ್ಷ ಮಲ್ಲಿಕಾರ್ಜುನ ಭಂಡಾರಿ, ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ ತಮಗಿಕರ್, ನೀಲಕಂಠ ಬುಯ್ಯಾ, ಸಿದ್ದಣ್ಣ ಭೂಶೆಟ್ಟಿ, ಮಹಾನಂದಾ ದೇಶಮುಖ, ನಾಗಯ್ಯ ಸ್ವಾಮಿ, ಪ್ರವೀಣ ಕುಲಕರ್ಣಿ, ಬಾಬುರಾವ ಜೋಳದಾಬಕಾ, ಸತೀಶ ನನ್ನೂರೆ, ಪ್ರಕಾಶ ಬಾವಗೆ ಹಾಗೂ ಸುಭಾಷ ರಗಟೆ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು, ಕಾರಂಜಾ ಮುಳುಗಡೆ ಸಂತ್ರಸ್ತರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.