ಮುದಗಲ್‌ನಲ್ಲಿ ಮತ್ತೊಂದು ಆಧಾರ ಕೇಂದ್ರ ಸ್ಥಾಪನೆಗೆ ಆಗ್ರಹ

| Published : May 22 2024, 12:48 AM IST

ಮುದಗಲ್‌ನಲ್ಲಿ ಮತ್ತೊಂದು ಆಧಾರ ಕೇಂದ್ರ ಸ್ಥಾಪನೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮುದಗಲ್‌ನಲ್ಲಿ ಆಧಾರ ಕಾರ್ಡ್‌ ಮಾಡುವ ಕೇಂದ್ರ ಮಂಜೂರು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಮುದಗಲ್‌

ಈಗಾಗಲೇ ಪಟ್ಟಣದಲ್ಲಿ ಸ್ಥಾಪಿಸಿರುವ ಆಧಾರ ಕೇಂದ್ರ ಸಾಕಾಗುತ್ತಿಲ್ಲ, ಆದ್ದರಿಂದ ಇನ್ನೊಂದು ಆಧಾರ ಕಾರ್ಡ್‌ ಮಾಡುವ ಕೇಂದ್ರಕ್ಕೆ ಮಂಜೂರು ನೀಡಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕ ಆಗ್ರಹಿಸಿದೆ. ಲಿಂಗಸುಗೂರು ಉಪವಿಭಾಗಾಧಿಕಾರಿಗೆ ಬರೆದ ಮನವಿ ಪತ್ರವನ್ನು ಪಟ್ಟಣದ ನಾಡಕಾರ್ಯಾಲಯ ಅಧಿಕಾರಿಗೆ ಸಲ್ಲಿಸಿದ ಕರವೇ ಪದಾಧಿಕಾರಿಗಳು, ಪಟ್ಟಣದಲ್ಲಿ ಕೇವಲ ಒಂದು ಆಧಾರ್ ಕಾರ್ಡ್ ಕೇಂದ್ರ ಇದೆ. ಈ ಹಿಂದೆ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಮಾಡುವುದನ್ನು ಎರಡು ವರ್ಷಗಳಿಂದ ನಿಲ್ಲಿಸಿದ್ದಾರೆ ಎಂದು ತಿಳಿಸಿದರು.ಮುದಗಲ್ ಹೋಬಳಿ ವ್ಯಾಪ್ತಿಗೆ ಬರುವ ಹೂನೂರು, ಬನ್ನಿಗೋಳ, ನಾಗಲಾಪೂರು, ಖೈರವಾಡಿಗೆ, ಆಮದಿಹಾಳ, ನಾಗರಹಾಳ, ಹಲ್ಕಾವಟಗಿ, ಬಯ್ಯಾಪೂರು, ಉಪ್ಪಾರನಂದಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 58 ಗ್ರಾಮಗಳು ಬರುತ್ತಿವೆ ಹಾಗೂ ಮುದಗಲ್ ಪಟ್ಟಣ ಕೂಡ 45000 ಜನಸಂಖ್ಯೆ ಹೊಂದಿದೆ. ಆದರೆ ಮುದಗಲ್ ಪಟ್ಟಣದಲ್ಲಿ ಒಂದೇ ಒಂದು ಆಧಾರ ಕಾರ್ಡ್‌ ಮಾಡಿಕೊಡುವ ಕೇಂದ್ರವಿದೆ. ಇದರಿಂದ ಆಧಾರ ಕಾರ್ಡ್‌ ಮಾಡಿಸಲು ಗ್ರಾಮೀಣ ಪ್ರದೇಶ ಜನರಿಗೆ ಮತ್ತು ಮುದಗಲ್‌ ಪಟ್ಟಣದ ಜನರಿಗೆ ತುಂಬಾ ತೊಂದರೆಯಾಗಿದೆ. ಜನರು ಬೆಳಗ್ಗೆಯಿಂದ ಕೆಲಸ ಕಾರ್ಯ ಬಿಟ್ಟು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಸರ್ವರ್‌ ಇಲ್ಲ ಎಂದು ನಾಲ್ಕು ಐದು ದಿನ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ಸಾರ್ವಜನಿಕರ ದಿನನಿತ್ಯದ ಗೋಳು ತಪ್ಪಿಸಬೇಕಾದರೆ ಮುದಗಲ್‌ನಲ್ಲಿ ಇನ್ನೂ ಮೂರು ನಾಲ್ಕು ಆಧಾರ ಕಾರ್ಡ್‌ ಕೇಂದ್ರ ತೆರೆಯಬೇಕಾದ ಅವಶ್ಯಕತೆ ಇರುತ್ತದೆ. ಆದ್ದರಿಂದ ಆದಷ್ಟು ಬೇಗ ಕೇಂದ್ರ ತೆರೆದು ಜನರಿಗೆ ಅನುಕೂಲ ಮಾಡಿ ಕೊಡ ಬೇಕೆಂದು ಮನವಿಮಾಡಿದ್ದಾರೆ.

ಎಸ್.ಎನ್. ಖಾದ್ರಿ, ಸಾಬು ಹುಸೇನ್, ಮಹಾಂತೇಶ್ ಚೆಟ್ಟರ್, ಗ್ಯಾನಪ್ಪ ಚಲವಾದಿ, ಭೀಮಣ್ಣ ಉಪ್ಪಾರ, ನಾಗರಾಜ್ ಮಟ್ಟೂರ, ಇಮಾಮ್ ಹುಸೇನ, ರೆಹಮಾನ್ ಜಂಬಾಳಿ, ಅಬ್ದುಲ್ ಮಜೀದ್, ಆನಂದ್, ಬಾಲಪ್ಪ ಉಪ್ಪಾರ, ಕೋಟಿಗೊಬ್ಬ, ರಫಿ, ಮಂಜೂರ್, ರಾಯಪ್ಪ ಗಂಟಿಹಾಳ ಉಪಸ್ಥಿತರಿದ್ದರು.