ಪ್ರತಿದಿನ ಕನಿಷ್ಠ ೭ ಗಂಟೆ ವಿದ್ಯುತ್ ನೀಡಲು ಆಗ್ರಹ
KannadaprabhaNewsNetwork | Published : Oct 20 2023, 01:00 AM IST
ಪ್ರತಿದಿನ ಕನಿಷ್ಠ ೭ ಗಂಟೆ ವಿದ್ಯುತ್ ನೀಡಲು ಆಗ್ರಹ
ಸಾರಾಂಶ
ಪ್ರತಿದಿನ ಕೃಷಿ ಪಂಪ್‌ಸೆಟ್‌ಗಳಿಗೆ ೭ ಗಂಟೆ ೩ ಪೇಸ್ ವಿದ್ಯುತ್ ಸರಬರಾಜಿಗಾಗಿ ಒತ್ತಾಯಿಸಿ ನಗರದ ಸಂತೆಪೇಟೆ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಚೆಸ್ಕಾಂ ಕಚೇರಿ ಮುಂದೆ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹಾಸನ ಚೆಸ್ಕಾಂ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ । ವಿದ್ಯುತ್ ಉಪಕೇಂದ್ರಗಳ ಅವಶ್ಯಕತೆ ಇರುವ ಕಡೆ ಪ್ರಾರಂಭಿಸಲು ಒತ್ತಾಯ ವಿದ್ಯುತ್ ತಾರತಮ್ಯ ನೀತಿ ವಿರೋಧಿಸಿ ಹಾಗೂ ಪ್ರತಿದಿನ ಕೃಷಿ ಪಂಪ್‌ಸೆಟ್‌ಗಳಿಗೆ ೭ ಗಂಟೆ ೩ ಪೇಸ್ ವಿದ್ಯುತ್ ಸರಬರಾಜಿಗಾಗಿ ಒತ್ತಾಯಿಸಿ ನಗರದ ಸಂತೆಪೇಟೆ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಚೆಸ್ಕಾಂ ಕಚೇರಿ ಮುಂದೆ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ೧೯೦ಕ್ಕಿಂತಲೂ ಹೆಚ್ಚು ತಾಲೂಕಿನಲ್ಲಿ ಬರ ಉದ್ಭವವಾಗಿದೆ, ಈ ತಾಲೂಕುಗಳು ಸಂಪೂರ್ಣ ಬರಗಾಲದ ಪ್ರದೇಶವೇಂದು ಘೋಷಿಸಲು ಸರ್ಕಾರವೇ ಶಿಫಾರಸು ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೆಲವು ನೀರಾವರಿ ಜಲಾಶಯಗಳು ಇದ್ದಾಗ್ಯೂ ೪೫ ಲಕ್ಷಕ್ಕಿಂತಲೂ ಹೆಚ್ಚು ರೈತರು ನೀರಾವರಿ ಪಂಪ್‌ಸೆಂಟ್‌ಗಳ ಮೇಲೆ ಅವಲಂಬಿಸಿ ತೋಟಗಾರಿಕೆ ಫಸಲುಗಳು ಮತ್ತು ಇತರೆ ಫಸಲುಗಳನ್ನು ಬೆಳೆದಿರುತ್ತಾರೆ. ಸರ್ಕಾರ ಕೃಷಿ ಪಂಪ್‌ಸೆಂಟ್‌ಗಳಗೆ ಪ್ರತಿ ದಿನವೂ ಸಹ ೭ ಗಂಟೆಗಳ ಕಾಲ ವಿದ್ಯುತ್ ಪೂರೈಸುವುದಾಗಿ ಹೇಳಿ ಕೇವಲ ೧ - ೨ ಗಂಟೆಗಳು ಮಾತ್ರ ವಿದ್ಯುತ್ ನೀಡುತ್ತಿದ್ದು, ಆದರೆ ಕೈಗಾರಿಕೆಗಳಿಗೆ ಎಂದಿನಂತೆ ವಿದ್ಯುತ್ ಸರಬರಾಜು ಮಾಡುತ್ತಾ ಕೃಷಿಯನ್ನು ನಿರ್ಲಕ್ಷಿಸಿ ತಾರತಮ್ಯ ಮಾಡಿದೆ ಎಂದು ದೂರಿದರು. ಬರಗಾಲದ ಛಾಯೆ ಜೂನ್ ತಿಂಗಳಲೇ ಉದ್ಭವವಾಗಿರುವುದು ಸರ್ಕಾರಕ್ಕೆ ತಿಳಿದಿದ್ದಾಗ್ಯೂ ಸರ್ಕಾರ ಮುಂಜಾಗ್ರತೆಯಿಂದ ವಿದ್ಯುತ್ ಕ್ಷಾಮವನ್ನು ನಿಗ್ರಹಿಸಲು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗದೆ ನಿರ್ಲಕ್ಷ್ಯ ಮಾಡಿರುವುದೆ ಇಂದಿನ ಸಮಸ್ಯೆಗೆ ಕಾರಣವಾಗಿದೆ ಎಂದರು. ಇದರಿಂದ ಆಗುವ ನಷ್ಟಕ್ಕೆ ಸರ್ಕಾರವೇ ಹೊಣೆಗಾರ ಸರ್ಕಾರದ ಈ ನಿರ್ಲಕ್ಷ್ಯ ಮತ್ತು ಹೊಣೆಗೇಡಿತವನ್ನು ಖಂಡಿಸಿ ಕೃಷಿ ಪಂಪ್‌ಸೆಟ್‌ಗಳಗೆ ಸರ್ಕಾರ ಮಾತಿನಂತೆ ಪ್ರತಿದಿನ ೭ ಗಂಟೆಗಳ ಕಾಲ ೩ ಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು. ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ೭ ಗಂಟೆಗಳ ಕಾಲ ೩ ಫೇಸ್ ಗುಣಾತ್ಮಕ ವಿದ್ಯುತ್ ನೀಡಿ ರೈತರು ಬೆಳೆದಿರುವ ಫಸಲುಗಳನ್ನು ರಕ್ಷಣೆ ಮಾಡಬೇಕು ಮತ್ತು ಮುಂದೆ ವಿದ್ಯುತ್ ಕ್ಷಾಮ ತಲೆದೋರದಂತೆ ಎಚ್ಚರಿಕೆ ವಹಿಸಬೇಕು. ಸೌರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕು ಮತ್ತು ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಡ್ಡಾಯ ಮಾಡಬೇಕು. ವಿದ್ಯುತ್ ಉಪಕೇಂದ್ರಗಳು ಅವಶ್ಯಕತೆ ಇರುವ ಕಡೆ ಪ್ರಾರಂಭಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದರು. ಸುಟ್ಟುಹೋಗಿರುವ ವಿದ್ಯುತ್ ಟ್ರಾನ್ಸ್ ಫಾರಂಗಳನ್ನು ನಿಗಧಿತ ಸಮಯದ ಒಳಗೆ ಬದಲಾಯಿಸಬೇಕು. ಸರ್ಕಾರ ಹಿಂದೆ ತಿರ್ಮಾನಿಸಿರುವಂತೆ ಕರ ನಿರಾಕರಣ ಚಳುವಳಿಯಲ್ಲ ಉಳಿಸಿಕೊಂಡಿರುವ ಬಾಕಿಯನ್ನು ಮನ್ನಾ ಮಾಡಬೇಕು. ಮತ್ತು ಚೆಸ್ಕಾಂ ಕಿರುಕುಳವನ್ನು ತಪ್ಪಿಸಬೇಕು ಎಂದು ಅಗ್ರಹಿಸಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಶೆಟ್ಟಿ, ಹಾಸನ ತಾಲೂಕು ಅಧ್ಯಕ್ಷ ಯು.ಎಲ್. ಶಾಂತರಾಜೇ ಅರಸು, ಗೌರವಾಧ್ಯಕ್ಷ ಇಮ್ರಾನ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಎಂ.ಎಲ್. ಹರೀಶ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ರಾಮಚಂದ್ರ, ಅರಸೀಕೆರೆ ತಾಲೂಕು ಅಧ್ಯಕ್ಷ ಶಿವಮೂರ್ತಿ, ಅರಕಲಗೂಡು ತಾಲೂಕು ಅಧ್ಯಕ್ಷ ಎಚ್.ಆರ್. ದಿನೇಶ್, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಸೋಮಶೇಖರ್, ಮಹಿಳಾ ಜಿಲ್ಲಾಧ್ಯಕ್ಷೆ ಕಾಮಾಕ್ಷಮ್ಮ, ಇತರರು ಉಪಸ್ಥಿತರಿದ್ದರು.