ಕೊಲೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹ

| Published : Apr 26 2024, 12:52 AM IST

ಸಾರಾಂಶ

ದೇಶದಲ್ಲಿ ಧರ್ಮ ಹಾಗೂ ಜಾತಿ ಹೆಸರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ವಿದ್ಯಾರ್ಥಿನಿಯರು ಬಲಿಯಾಗುತ್ತಿರುವುದು ನೋವಿನ ಸಂಗತಿ

ನರಗುಂದ: ನೇಹಾ ಹಿರೇಮಠ ಕೊಲೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇಂತಹ ಕೃತ್ಯಗಳು ಮತ್ತೆ ಮರುಕಳಿಸದಿರಲು ಕೂಡಲೇ ಕಾನೂನಿನಲ್ಲಿ ಬದಲಾವಣೆಗಳು ಆಗಬೇಕು. ಗುಂಡಿಕ್ಕುವ ಆದೇಶ ಅಥವಾ ಎನ್ ಕೌಂಟರ ಜಾರಿಗೆ ಬರಬೇಕೆಂದು ಪಂಚಗೃಹ ಗುಡ್ಡದ ಹಿರೇಮಠದ ಶ್ರೀಸಿದ್ದಲಿಂಗ ಸ್ವಾಮಿಗಳು ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನೇಹಾ ಹಿರೇಮಠ ಹತ್ಯೆಯಾಗಿದ್ದನ್ನು ಖಂಡಿಸಿ ಸರ್ವ ಧರ್ಮದ ಮಠಾಧೀಶರು, ಸರ್ವ ಸಮಾಜಗಳ ಬಾಂಧವರು ಮತ್ತು ಸರ್ವ ಸಮಾಜಗಳ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿ, ಕೊಲೆ ಆರೋಪಿ ಫಯಾಜ್ ನನ್ನು ಶೂಟೌಟ್‌ ಮಾಡಬೇಕೆಂದು ಆಗ್ರಹಿಸಿದರು.

ದೇಶದಲ್ಲಿ ಧರ್ಮ ಹಾಗೂ ಜಾತಿ ಹೆಸರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ವಿದ್ಯಾರ್ಥಿನಿಯರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಹೀಗಾಗಿ ಸರ್ಕಾರ ಈ ರೀತಿ ಅಪರಾಧ ಮಾಡುವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ನಂದೀಶ ಮಠದ ಮಾತನಾಡಿ, ದೇಶದಲ್ಲಿ ಕ್ಷಮಿಸಲಾರದಂತಹ ಅಪರಾಧಗಳು ನಡೆಯುತ್ತಿವೆ. ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವಷ್ಟು ಕಾನೂನು ದುರ್ಬಲವಾಗಿದೆ. ಹೀಗಾಗಿ ಕಾನೂನು ಬದಲಾಗಬೇಕಾಗಿದೆ. ಅಪರಾಧಿ ಸಾಕ್ಷಿ ಸಮೇತ ಸಿಕ್ಕ ಮೇಲೆ ತನಿಖೆ ಯಾಕೆ ಆಗಬೇಕು. ಅಪರಾಧಿ ನೂರಕ್ಕೆ ನೂರರಷ್ಟು ಕೃತ್ಯ ಎಸಗಿದ್ದು ಸಿಸಿ ಟಿವಿ ಮೂಲಕ ಪತ್ತೆಯಾದ ಮೇಲೆ ಇಡೀ ರಾಜ್ಯ ಕಣ್ಣಾರೆ ಕಂಡ ಮೇಲೆ ಮತ್ತೇಕೆ ತನಿಖೆ ಅದು ಇದು ಎಲ್ಲವನ್ನು ನಿಲ್ಲಿಸಿ, ಅಪರಾಧಿ ಫಯಾಜ್ ಅಂತವರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಆಗ್ರಹಿಸಿದರು.

ಸದ್ದಾಂಹುಸೇನ ಚಂದೂನವರ ಮಾತನಾಡಿ, ಭಯಾನಕವಾಗಿ ಹತ್ಯೆಗೈಯುವ ವ್ಯಕ್ತಿಗಳನ್ನು ಜಾತಿಗಳಿಗೆ ಹೊಲಿಸದೆ ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲುವ ಕಾನೂನು ಬರಬೇಕು. ಅಂದಾಗ ಇಂತಹ ಘಟನೆಗಳು ಮತ್ತೆ ಜರುಗುವುದಿಲ್ಲ ಎಂದರು.

ನರಗುಂದ ಬಂದ್ :

ಸಂದರ್ಭದಲ್ಲಿ ಪಟ್ಟಣದ ಜನತೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಪತ್ರೀವನ ಮಠದ ಶ್ರೀಗುರು ಸಿದ್ಧವೀರ ಶಿವಾಚಾರ್ಯ ಶ್ರೀಗಳು, ಭೈರನಹಟ್ಟಿ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು, ವಿರಕ್ತಮಠದ ಶಿವಕುಮಾರ ಶ್ರೀಗಳು, ಬಾಬು ಶರಣರು, ಡಾ. ಸಿ.ಕೆ. ರಾಚನಗೌಡ್ರ, ಮಹೇಶ್ವರಯ್ಯ ಸುರೇಬಾನ, ರವಿ ಹೊಂಗಲ, ಸಂಭಾಜಿ ಕಾಶೀದ, ಎಂ.ಆರ್. ಕಾಳೆ, ನಿಂಗಪ್ಪ ನಾಗನೂರ, ಸಂಗಣ್ಣ ಕಳಸಾ, ಈಶ್ವರ ಶಾಸ್ತ್ರೀಗಳು ಹಿರೇಮಠ, ಅನೀಲ ಧರಿಯಣ್ಣವರ, ಸುಕನ್ಯಾ ಸಾಲಿಮಠ, ಮಾಲಾ ಪಾಟೀಲ, ಮಾಧು ಪವಾರ, ಸಿದ್ದಾರೂಢ ಪಾತ್ರೋಟ, ಪ್ರವೀಣ ವಡ್ಡರ, ಕುಮಾರ ಬೆಳವಟಿಗಿ, ಶಂಕ್ರಯ್ಯ ಹಿರೇಮಠ, ಮಹೇಶ ಹಾರೋಗೇರಿಮಠ ಸೇರಿದಂತೆ ಸಾರ್ವಜನಿಕರು ಇದ್ದರು.