ಅನಧಿಕೃತ ಬಾರ್‌, ರೆಸ್ಟೋರೆಂಟ್‌ ಸ್ಥಗಿತಕ್ಕೆ ಆಗ್ರಹ

| Published : May 28 2024, 01:04 AM IST

ಸಾರಾಂಶ

ಕಂದಾಯ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗೆ ಅನುಮತಿ ನೀಡಿದ್ದಾರೆ. ಪಹಣಿ ಇಲ್ಲದ ಸ್ಥಳಕ್ಕೆ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯವರು ಅನುಮತಿ ನೀಡಿದ್ದಾರೆ ಎಂದು ಎಂ.ಜಿ. ಭಟ್ಟ ದೂರಿದರು.

ಯಲ್ಲಾಪುರ: ಪಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೬೩ರ ಪಕ್ಕದ ಗಾಂಧಿ ಚೌಕದ ಸಮೀಪ ಸ.ನಂ. ೪೭೭ ೧ಅ ಜಿ.ಆರ್. ೨ಗೆ ಸುಳ್ಳು ದಾಖಲೆ ನೀಡಿದ್ದನ್ನು ಆಧರಿಸಿ ನಮೂನೆ ೩ನ್ನು ರದ್ದುಪಡಿಸಿ, ಅನಧಿಕೃತವಾಗಿ ನಡೆಯುತ್ತಿರುವ ಸೆವೆನ್(೭) ಬಾರ್ ಮತ್ತು ರೆಸ್ಟೊರೆಂಟ್‌ಅನ್ನು ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಎಂ.ಜಿ. ಭಟ್ಟ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಹಿತ ಮಾಹಿತಿ ನೀಡಿ, ಈ ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ತಿಳಿಸಿದರು.

ಪಪಂ ವ್ಯಾಪ್ತಿ ಇರುವುದರಿಂದ ಪಹಣಿ ಪತ್ರಿಕೆ ಇಲ್ಲದ ಸ.ನಂ. ೪೭೭ ೧ಅ ಜಿ.ಆರ್.೨ಗೆ ನಮೂನೆ ೩ ನೀಡಲಾಗಿದೆ. ಈ ದಾಖಲೆಯನ್ನೇ ಆಧರಿಸಿ ಕಟ್ಟಡ ನವೀಕರಿಸಿ, ಬಾರ್ ಮತ್ತು ರೆಸ್ಟೋರೆಂಟ್‌ಗೆ ಅನುಮತಿ ಪಡೆದು ನಡೆಸಲಾಗುತ್ತಿದೆ. ಪಹಣಿ ಪತ್ರಿಕೆಯೇ ಇಲ್ಲದ ಜಾಗಕ್ಕೆ ನಮೂನೆ ೩ ನೀಡಿರುವ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಿದಾಗ, ಮುಖ್ಯಾಧಿಕಾರಿಗಳು ಇದಕ್ಕೆ ಪಹಣಿ, ಮ್ಯುಟೇಶನ್ ಎಂಟ್ರಿ, ಹಾತ್ ನಕಾಶೆ ನೀಡಿಲ್ಲ ಎಂದು ಹಿಂಬರಹ ನೀಡಿದರೂ ನಮೂನೆ ೩ನ್ನು ಮಾತ್ರ ರದ್ದುಪಡಿಸಿಲ್ಲ ಎಂದರು.

ಲೋಕೋಪಯೋಗಿ ಇಲಾಖೆಯ ಶಿರಸಿ ಕಾರ್ಯನಿರ್ವಾಹಕ ಅಭಿಯಂತರರು ೭೦ ವರ್ಷ ಹಳೆಯದಾದ ಕಟ್ಟಡ ೪೭೮ ೧ ಅ ಜಿ.ಆರ್. ದಲ್ಲಿದ್ದು, ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ದು ವಿಚಿತ್ರವಾಗಿದೆ. ೪೭೭ರಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸುವ ಕಟ್ಟಡಕ್ಕೆ ೪೭೮ ಸ.ನಂ.ನ ಕಟ್ಟಡದ ಫಿಟ್ನೆಸ್ ಸರ್ಟಿಫಿಕೇಟ್ ನೀಡುವ ಮೂಲಕ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ೪೦ ಮೀ. ಒಳಗೆ ಬಾರ್ ಮತ್ತು ರೆಸ್ಟೋರೆಂಟ್ ಇರಕೂಡದೆಂಬ ನಿಯಮವಿದ್ದರೂ, ಕೇವಲ ೧೩.೬ ಮೀ. ದೂರದಲ್ಲಿ ಅನುಮತಿ ನೀಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರೂ ಈ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗೆ ಅನುಮತಿ ನೀಡಿದ್ದಾರೆ. ಪಹಣಿ ಇಲ್ಲದ ಸ್ಥಳಕ್ಕೆ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯವರು ಅನುಮತಿ ನೀಡಿದ್ದಾರೆ ಎಂದು ದೂರಿದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಕಾರವಾರದ ಯೋಜನಾ ನಿರ್ದೇಶಕರಿಗೆ ದೂರಿದ್ದು, ಅವರು ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಆರ್‌ಟಿಐ ಕಾರ್ಯಕರ್ತ ಧೀರಜ ತಿನೆಕರ್ ಮಾತನಾಡಿ, ಈ ಭ್ರಷ್ಟಾಚಾರದಲ್ಲಿ ಭಾಗಿಯಾದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ಪಪಂನ ಈ ಹಿಂದಿನ ೩ ಮುಖ್ಯಾಧಿಕಾರಿಗಳಾದ ಮಹೇಂದ್ರ ತಿಮ್ಮಾನಿ, ಅರುಣ ನಾಯ್ಕ, ಸುನೀಲ ಗಾವಡೆ, ಹಾಲಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ತೆರಿಗೆ ನಿರೀಕ್ಷಕ ಶ್ರೀನಿವಾಸ ಗುಂಡು, ಇದಕ್ಕೆ ಅನುಮತಿ ನೀಡಿದ ಅಬಕಾರಿ ನಿರೀಕ್ಷಕ, ತಹಸೀಲ್ದಾರ್‌ ಸೇರಿದಂತೆ ೭ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ ಎಂದರು.