ಪಿಂಜಾರ ಅಭಿವೃದ್ಧಿಗೆ ವಿಶೇಷಾನುದಾನಕ್ಕೆ ಒತ್ತಾಯ

| Published : Feb 08 2024, 01:34 AM IST

ಸಾರಾಂಶ

ಅತ್ಯಂತ ಕಡು ಬಡತನದಲ್ಲಿರುವ ಪಿಂಜಾರರ ಬದುಕನ್ನು ಹಸನಾಗಿಸಲು ಸರ್ಕಾರ ಒತ್ತು ನೀಡಬೇಕು ಎಂದು ಭಾರತೀಯ ಪಿಂಜಾರ ನದಾಫ್‌ ಮನ್ಸೂರಿ ಭಾವೈಕ್ಯತೆ ಗುರುಪೀಠದ ಧರ್ಮಗುರು ಸಂಗಮ್ ಪೀರ್ ಚಿಸ್ತಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಮೂಲೆ ಮೂಲೆಗಳಲ್ಲಿ ಅಲೆಮಾರಿಗಳಾಗಿ ಜೀವನ ನಡೆಸುತ್ತಿರುವ ಪಿಂಜಾರ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಟ್ಟು, ಪಿಂಜಾರರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಭಾರತೀಯ ಪಿಂಜಾರ ನದಾಫ್‌ ಮನ್ಸೂರಿ ಭಾವೈಕ್ಯತೆ ಗುರುಪೀಠದ ಧರ್ಮಗುರು ಸಂಗಮ್ ಪೀರ್ ಚಿಸ್ತಿ ಒತ್ತಾಯಿಸಿದ್ದಾರೆ.

ತಾಲೂಕಿನ ಕಕ್ಕರಗೊಳ್ಳ ಗ್ರಾಮಕ್ಕೆ ಭೇಟಿ ನೀಡಿದ್ದ ಸಮಾಜ ಬಾಂಧವರು, ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಿಂಜಾರರು ಹಾಸಿಗೆ ಹೊಲಿಯುವುದೂ ಸೇರಿದಂತೆ ವಿವಿಧ ವೃತ್ತಿಗಳನ್ನು ಮಾಡಿಕೊಂಡು ಅಲೆಮಾರಿ ಬದುಕನ್ನು ಬಾಳುತ್ತಿದ್ದು, ಅಂತಹವರ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದರು.

ಅತ್ಯಂತ ಕಡು ಬಡತನದಲ್ಲಿರುವ ಪಿಂಜಾರರ ಬದುಕನ್ನು ಹಸನಾಗಿಸಲು ಸರ್ಕಾರ ಒತ್ತು ನೀಡಬೇಕು. ಪಿಂಜಾರ ಸಮಾಜದಲ್ಲಿ ಬಡತನ ಆಳವಾಗಿ ಬೇರೂರಿದೆ. ಶಿಕ್ಷಣ ಮರೀಚಿಕೆಯಾಗಿದೆ. ಒಂದು ಕಡೆ ನೆಲೆ ನಿಲ್ಲಲು ಸರಿಯಾದ ಸೂರು ಸಹ ಇಲ್ಲದ ಸಮುದಾಯ ಇದಾಗಿದೆ. ಪಿಂಜಾರ್, ನದಾಫ್‌, ಮನ್ಸೂರಿ ಹೀಗೆ ನಾನಾ ಹೆಸರಿನಲ್ಲಿ ಕರೆಯಲ್ಪ ಡುವ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಸರ್ಕಾರ ಮಾಡಬೇಕು ಎಂದು ಅವರು ಮನವಿ ಮಾಡಿದರು. ಸರ್ಕಾರದ ಸೌಲಭ್ಯ ವಂಚಿತ ಸಮಾಜ ಇದು. ಬಡತನ ನಿರ್ಮೂಲನೆಗಾಗಿ ಸಮಾಜ ಬಾಂಧವರು ಒಗ್ಗೂಡಿ ಹೋರಾಟಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಮೊದಲು ಸಂಘಟಿತ ರಾಗಬೇಕು. ತಮಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು. ಸರ್ಕಾರವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪಿಂಜಾರ ವಿದ್ಯಾರ್ಥಿ ನಿಲಯ ಗಳನ್ನು ಸ್ಥಾಪಿಸುವ ಮೂಲಕ ಸಮಾಜವನ್ನು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದರು.

ಕಕ್ಕರಗೊಳ್ಳ ಗ್ರಾಮದ ಜಾಮೀಯಾ ಮಸೀದಿ ಮೌಲಾನಾ ವಕಾರ್‌ ಅಹಮ್ಮದ್, ಮುಖಂಡರಾದ ಪಿ.ಹುಸೇನ್ ಸಾಬ್‌, ಜಮಾಲ್ ಸಾಬ್‌, ಕೆ.ಚಮನ್ ಸಾಬ್ ಅಂಗಡಿ, ಶಫೀ ಸಾಬ್ ನಂದಿಹಳ್ಳಿ, ಸುಭಾನ್ ನೇಗಿ, ಮುನ್ನಾಸಾಬ್ ಭಾನುವಳ್ಳಿ, ಮುಸ್ತಾಫ್, ಆರ್‌. ಅಹಮ್ಮದ್ ಸಾಬ್‌, ದೂದ್ ಪೀರ್‌, ಖಾದರ್ ಬಾಷಾ, ಸರ್ವೇಯರ್ ಫಕೃದ್ದೀನ್, ಹಿರಿಯ ಪತ್ರಕರ್ತ ಬಿ.ಸಿಕಂದರ್ ಇತರರು ಇದ್ದರು.