ವಾಲ್ಮೀಕಿ ಸಮುದಾಯಕ್ಕೆ ವಿಶೇಷ ಅನುದಾನಕ್ಕೆ ಆಗ್ರಹ

| Published : Jul 30 2024, 12:37 AM IST

ಸಾರಾಂಶ

ಸ್ವಾತಂತಂತ್ರ್ಯ ಬಂದು 75 ವರ್ಷಗಳು ಕಳೆದರೂ ಶೋಷಣೆ, ದೌರ್ಜನ್ಯ, ಜಾತಿ ತಾರತಮ್ಯ ಮಾಡಲಾಗುತ್ತಿದೆ. ಜಾತಿ ತಾರತಮ್ಯ ಸಮಾಜದಿಂದ ತೊಲಗಬೇಕು. ಶೈಕ್ಷಣಿಕ ಅಭಿವೃದ್ದಿಯಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ದಿ ಹೊಂದಲು ಸಾಧ್ಯ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ವಾಲ್ಮೀಕಿ ನಿಗಮದಲ್ಲಿ 180 ಕೋಟಿ ರೂ.ಗಳ ಹಗರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದೆ. ಸತ್ಯಾ ಸತ್ಯತೆ ಹೊರಬಂದ ಬಳಿಕ ನಮ್ಮ ಸಮುದಾಯಕ್ಕೆ ವಿಶೇಷ ಅನುದಾನ ನೀಡದಿದ್ದರೆ ಹೋರಾಟ ಅನಿವರ್ಯ ಎಂದು ವಾಲ್ಮೀಕಿ ಮಹಾಸಂಸ್ಥಾನದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದ ಹೊರವಲಯದ ಸೂರ್ಯ ಕನ್ವೆನ್ಷನ್‌ ಹಾಲ್‌ನಲ್ಲಿ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದವತಿಯಿಂದ ಏರ್ಪಡಿಸಿದ್ದ 17ನೇ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿ, ಸ್ವಾತಂತಂತ್ರ್ಯ ಬಂದು 75 ವರ್ಷಗಳು ಕಳೆದರೂ ಶೋಷಣೆ, ದೌರ್ಜನ್ಯ, ಜಾತಿ ತಾರತಮ್ಯ ಮಾಡುತ್ತಿದ್ದಾರೆ ಎಂದರು.

ಜಾತಿಯ ಬಗ್ಗೆ ಕೀಳರಿಮೆ ಬೇಡ

ಮಹಾಭಾರತ ಬರೆದವರು ವ್ಯಾಸ ಮಹರ್ಷಿಗಳು, ಸಂವಿಧಾನ ನೀಡಿದವರು ಡಾ.ಅಂಬೇಡ್ಕರ್. ಹಾಗಾಗಿ ಜಾತಿಯ ಕಾರಣಕ್ಕಾಗಿ ಕೀಳರಿಮೆ ಇಟ್ಟುಕೊಳ್ಳುವುದು ಬೇಡ, ದೇಶದಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ ಸಮಾಜದಿಂದ ತೊಲಗಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ಶೈಕ್ಷಣಿಕ ಅಭಿವೃದ್ದಿಯಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಸಮುದಾಯದ ಅಭಿವೃದ್ದಿ ಶಿಕ್ಷಣವೊಂದೇ ಮುಖ್ಯ ಅಸ್ತ್ರ. ಜೀವನದಲ್ಲಿ ಸಾಧಿಸಬೇಕು ಎಂಬ ಛಲ ಮತ್ತು ಹಠ ಇದ್ದಾಗ ಮಾತ್ರ ಗುರಿಯನ್ನು ಸಾಧಿಸಲು ಸಾಧ್ಯ ಎಂದರು.

ವರ್ತಮಾನ ಕಡೆಗಣಿಸಬೇಡಿ

ಕರ್ನಾಟಕ ರಾಜ್ಯ ಅಗ್ನಿಶಾಮಿಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರೀಕ್ಷಕ ರವಿ.ಡಿ.ಚೆನ್ನಣ್ಣನವರ್ ಮಾತನಾಡಿ, ನಮ್ಮ ಸಮುದಾಯದ ಗತ ಇತಿಹಾಸ, ಪರಂಪರೆಯನ್ನೇ ಹೇಳಿಕೊಂಡು ವರ್ತಮಾನವನ್ನು ಕಡೆಗಣಿಸಿದರೆ ನಮ್ಮ ಭವಿಷ್ಯವನ್ನು ನಾವೇ ಕತ್ತಲೆಗೆ ದೂಡಿದಂತಾಗುತ್ತೆ ಎಂದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯು ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಲಾಯಿತು.

ಕಾಯಕ್ರಮದಲ್ಲಿ ನಿವೃತ್ತ ನ್ಯಾ. ಪಾಟಿಲ್ ನಾಗಲಿಂಗನ ಗೌಡ, ಜಿಪಂ ಮಾಜಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ತಾಪಂ ಸ್ಥಾಯಿ ಸಮಿತಿ ಸದಸ್ಯ ಮಂಜುನಾಥ್, ಪಶಸಂಗೋಪನ ನಿವೃತ್ತ ನಿರ್ದೇಶಕ ಶಿವರಾಂ, ವಾಲ್ಮೀಕಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ. ನಂಜುಂಡಪ್ಪ, ಉಪಾಧ್ಯಕ್ಷ ಎಚ್.ಎನ್.ನರಸಿಂಹಯ್ಯ, ಕಾರ್ಯದರ್ಶಿ ಕೃಷ್ಣಮೂರ್ತಿ,, ಸಂಘಟನಾ ಕಾರ್ಯದರ್ಶಿ ಶಿವಪ್ಪ, ಶರಣಪ್ಪ, ಸಹಕಾರ್ಯದರ್ಶಿ ಎನ್.ಸುಧಾಕರ್, ವಾಲ್ಮೀಕಿ ಸಂಘದ ಅಧ್ಯಕ್ಷ ಮರಿಯಪ್ಪ ಮತ್ತಿತರರು ಇದ್ದರು.