ಸಾರಾಂಶ
ಮೋಹನ್ ರಾಜ್
ಕನ್ನಡಪ್ರಭ ವಾರ್ತೆ ಮಡಿಕೇರಿಸಿದ್ದಾಪುರ - ಕುಶಾಲನಗರ ನಡುವಿನ ಮಾರ್ಗದಲ್ಲಿ ಕೆಲ ಕಡೆ ರಸ್ತೆ ಡಾಂಬರು ಮಾಯವಾಗಿದ್ದು, ಬೃಹದಾಕರದ ಹೊಂಡಗಳು ನಿರ್ಮಾಣವಾಗಿವೆ. ತೀರಾ ಹದಗೆಟ್ಟಿರುವ ಈ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು, ಸವಾರರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಕೂಡಲೇ ಈ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಒತ್ತಾಯಿಸಿದ್ದಾರೆ.
ಈ ಮಾರ್ಗದಲ್ಲಿ ವಾಲ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಒಂಟಿಯಂಗಡಿ ತಿರುವಿನಿಂದ ಬಾಳೆಗುಂಡಿವರೆಗಿನ ರಸ್ತೆಯಲ್ಲಿ ಎಲ್ಲಿನೋಡಿದರಲ್ಲಿ ದೊಡ್ಡ ದೊಡ್ಡ ಹೊಂಡಗಳಿವೆ. ಸಣ್ಣ ಪ್ರಮಾಣದಲ್ಲಿ ಕಂಡುಬಂದಿದ್ದ ಈ ಗುಂಡಿಗಳಲ್ಲಿ ಮಳೆ ನೀರು ನಿಂತು ಇದೀಗ ಬೃಹತ್ ಹೊಂಡಗಳಾಗಿ ಬದಲಾಗಿವೆ ಇದರಿಂದ ವಾಹನ ಸಂಚಾರಕ್ಕೂ ದುಸ್ತರವಾಗಿದೆ. ಬೈಕ್ ಸವಾರರಿಗಂತೂ ಈ ರಸ್ತೆ ಸಾಹಸಮಯವೇ ಸರಿ. ಸಿದ್ದಾಪುರ ಹಾಗೂ ಚೆಟ್ಟಳ್ಳಿ ಕಡೆಗಳಿಂದ ದುಬಾರೆ ಆನೆ ಶಿಬಿರ, ಕುಶಾಲನಗರಕ್ಕೆ ತೆರಳುವವರು ಇದೇ ಮಾರ್ಗವಾಗಿ ಹೋಗಬೇಕಾಗಿದ್ದು, ರಸ್ತೆ ಅವ್ಯವಸ್ಥೆಯಿಂದಾಗಿ ಸ್ಥಳೀಯರು, ಪ್ರವಾಸಿಗರೂ ಪರದಾಡುವಂತಾಗಿದೆ. ಅಲ್ಲದೆ, ಬೈಕ್ ಸವಾರರು ಹಲವರು ಇದೇ ಬೃಹತ್ ಗುಂಡಿಗಳಿಂದಾಗಿ ಬಿದ್ದು ತೀವ್ರ ಗಾಯಗೊಂಡಿರುವ ಘಟನೆಗಳು ಸಂಭವಿಸಿದೆ.ನಿತ್ಯ ಈ ಮಾರ್ಗದಲ್ಲಿಸಾಗುವ ವಾಹನ ಸವಾರರ ಪಾಡಂತೂ ಹೇಳತೀರದು. ರಸ್ತೆಯ ಅವ್ಯವಸ್ಥೆಯಿಂದಾಗಿ ಬೆನ್ನು, ಸೊಂಟ ನೋವುಗಳಿಗೆ ಗುರಿಯಾಗಿ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಹಲವಾರು ಬಾರಿ ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ಕಾಡಿ, ಬೇಡಿದರೂ ರಸ್ತೆ ಮಾತ್ರ ರಿಪೇರಿ ಭಾಗ್ಯ ಕಂಡಿಲ್ಲ.
ಪ್ರತಿ ವರ್ಷ ಕೋಟ್ಯಂತರ ರುಪಾಯಿಗಳನ್ನು ರಸ್ತೆಗಳ ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಗಳಿಗಾಗಿ ಸರ್ಕಾರ ಮಂಜೂರು ಮಾಡುತ್ತಿದೆ. ಆದರೆ, ಹೆದ್ದಾರಿ ಹೊರತುಪಡಿಸಿ ಮತ್ಯಾವ ರಸ್ತೆಗಳೂ ಸಂಪೂರ್ಣ ಅಭಿವೃದ್ದಿ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಇದೇ ರಸ್ತೆಯಲ್ಲಿ ಕಬ್ಬಿನಗದ್ದೆಯಿಂದ ಬಾಳಗೋಡು ವರೆಗೂ ಕೂಡ ಇಂತಹದೇ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಯಲ್ಲಿ ಸಂಚರಿಸಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇಲ್ಲಿನ ಬೃಹತ್ ಹೊಂಡಗಳು ಸವಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಆದುದರಿಂದ ಸ್ಥಳೀಯ ಶಾಸಕರು, ಸಂಬಂಧ ಪಟ್ಟ ಇಲಾಖೆ ಒಮ್ಮೆ ಈ ಕುರಿತು ಕಣ್ತೆರೆದು ನೋಡಬೇಕು ಎಂಬ ಆಗ್ರಹ ಕೇಳಿಬಂದಿದೆ.